ನ್ಯೂಯಾರ್ಕ್: ನಿಗದಿಯಂತೆಯೇ ಭಾರತ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್ ಕೊರೋನಾ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ್ದು, ಭಾರತ ಸರ್ಕಾರದ ಕಾರ್ಯಕ್ಕೆ ವಿಶ್ವಸಂಸ್ಥೆ ಧನ್ಯವಾದ ಸಲ್ಲಿಸಿದೆ.
ಯುಎನ್ ಶಾಂತಿಪಾಲನಾ ಪಡೆಗೆ ಭಾರತ ಸರ್ಕಾರವು ಉಡುಗೊರೆಯಾಗಿ ಘೋಷಿಸಿದ್ದ 2 ಲಕ್ಷ ಡೋಸ್ ಕೋವಿಡ್-19 ಲಸಿಕೆಗಳನ್ನು ಶನಿವಾರ ಮುಂಜಾನೆ ಮುಂಬೈನಿಂದ ರಫ್ತು ಮಾಡಲಾಗಿದ್ದು,. ಈ ಲಸಿಕೆಗಳು ಇದೀಗ ಡೆನ್ಮಾರ್ಕ್ನ ಕೋಪನ್ ಹೇಗನ್ ತಲುಪಿವೆ. ಈ ಲಸಿಕೆಗಳನ್ನು ವಿಶ್ವಸಂಸ್ಥೆ ಎಲ್ಲಾ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳಿಗೆ ನೀಡಲಿದೆ.
ಜಾಗತಿಕ ಲಸಿಕೆ ಮೈತ್ರಿ ಪರೋಪಕಾರದ ಭಾಗವಾಗಿ ಭಾರತ ಸರ್ಕಾರ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ 2 ಲಕ್ಷ ಕೋವಿಡ್ ಡೋಸ್ ಉಡುಗೊರೆ ನೀಡಿದ್ದನ್ನು ಯುಎನ್ ಶಾಂತಿಪಾಲನ ಮುಖ್ಯಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಂತಿ ಪಾಲನಾ ಪಡೆಯ ಕಾರ್ಯಾಚರಣೆಗಳ ಸೆಕ್ರೆಟರಿ ಜನರಲ್ ಜೀನ್-ಪಿಯರ್ ಲ್ಯಾಕ್ರೊಯಿಕ್ಸ್ ಮತ್ತು ಕಾರ್ಯಾಚರಣಾ ಬೆಂಬಲದ ಸೆಕ್ರೆಟರಿ ಜನರಲ್ ಅತುಲ್ ಖರೆ ಅವರು ಯುಎನ್ ಶಾಂತಿಪಾಲಕರಿಗೆ ಭಾರತ ನೀಡಿದ ಲಸಿಕೆ ಪ್ರಮಾಣದ ಕೊಡುಗೆಯನ್ನು ಶ್ಲಾಘಿಸಿದರು. ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ 2,00,000 ಡೋಸ್ ಕೋವಿಡ್-19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಭಾರತಕ್ಕೆ ಕೃತಜ್ಞತೆಗಳು. ಈ ದೇಣಿಗೆಯಿಂದಾಗಿ ಶಾಂತಿ ಪಾಲನಾ ಪಡೆಯ ಸೈನಿಕರು ತಮ್ಮ ಜೀವ ಉಳಿಸುವ ಕಾರ್ಯವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ನಮ್ಮ ಸಿಬ್ಬಂದಿ ಮತ್ತು ಅವರ ನಿರ್ಣಾಯಕ ಕೆಲಸವನ್ನು ಮುಂದುವರೆಸುವ ಸಾಮರ್ಥ್ಯ, ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಅವರ ಆದೇಶಗಳನ್ನು ತಲುಪಿಸಲು ನೆರವಾಗುವ ಸಲುವಾಗಿ ಎಲ್ಲಾ ಶಾಂತಿಪಾಲಕರಿಗೆ ಕೋವಿಡ್-19 ಲಸಿಕೆ ಪರಿಣಾಮಕಾರಿಯಾಗಿ ನೀಡುವುದು ವಿಶ್ವಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಲ್ಯಾಕ್ರೊಯಿಕ್ಸ್ ಹೇಳಿದರು.
ಭಾರತವು ಶಾಂತಿಪಾಲನೆಯ ದೀರ್ಘಕಾಲದ ಮತ್ತು ಅಚಲ ಬೆಂಬಲಿತ ದೇಶವಾಗಿ ನಿಂತಿದೆ. ನಮ್ಮ ಶಾಂತಿಪಾಲನಾ ಸಿಬ್ಬಂದಿಗೆ ಅನುಕೂಲವಾಗುವಂತೆ ಮತ್ತು ತಮ್ಮ ಜೀವ ಉಳಿಸುವ ಕೆಲಸವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸಲು ಅನುವು ಮಾಡಿಕೊಡುವಂತೆ ಕೋವಿಡ್-19 ಲಸಿಕೆಗಳನ್ನು ಉದಾರವಾಗಿ ದಾನ ಮಾಡಿದ ಮೋದಿ ಸರ್ಕಾರ ಮತ್ತು ಭಾರತದ ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಯುಎನ್ ಶಾಂತಿಪಾಲಕರಿಗೆ ಭಾರತ 2 ಲಕ್ಷ ಕೋವಿಡ್ -19 ಲಸಿಕೆ ಉಡುಗೊರೆಯಾಗಿ ನೀಡಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಕಳೆದ ಫೆಬ್ರವರಿಯಲ್ಲಿ ಘೋಷಿಸಿದ್ದರು. ಇಂತಹ ಕಷ್ಟದ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಯುಎನ್ ಶಾಂತಿಪಾಲಕರನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ 2 ಲಕ್ಷ ಡೋಸ್ ಉಡುಗೊರೆ ನೀಡಲು ನಾವು ಬಯಸುತ್ತೇವೆ ಎಂದು ಜೈಶಂಕರ್ ಯುಎನ್ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಹೇಳಿದ್ದರು. ಅದರಂತೆ ನಿನ್ನೆ ಮುಂಬೈನಿಂದ ಕೋಪನ್ ಹೇಗನ್ ಗೆ ಕೋವಿಡ್ ಲಸಿಕೆಗಳು ರಫ್ತಾಗಿವೆ.