ಮಾರ್ಚ್ 31ರ ರೊಳಗೆ ಆಧಾರ್ ಕಾರ್ಡ್‍ನೊಂದಿಗೆ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್)ಅನ್ನು ಲಿಂಕ್ ಮಾಡದೇ ಇದ್ದರೆ ಅದು ಎಲ್ಲ ಎಲ್ಲರಿಗೂ ದುಬಾರಿಯಾಗಬಹುದು. ಲಿಂಕ್ ಮಾಡದಿದ್ದರೆ 1,000 ರೂ.ದಂಡ ಪಾವತಿಸಬೇಕಾದ ಹೊಣೆಗಾರಿಕೆಯ ಜೊತೆಗೆ ಪ್ಯಾನ್ ಕಾರ್ಡ್ ಸಹ ಅಮಾನ್ಯವಾಗುತ್ತದೆ.
ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲ್ಪಟ್ಟ 2021ರ ಹಣಕಾಸು ಮಸೂದೆಯಲ್ಲಿ ಪರಿಚಯಿಸಲಾದ ಹೊಸ ತಿದ್ದುಪಡಿಯ ಭಾಗ ಇದಾಗಿದೆ. 2021ರ ಹಣಕಾಸು ಮಸೂದೆಯನ್ನು ಅಂಗೀಕರಿಸುವಾಗ 2021ರ ಮಾರ್ಚ್ 31ರ ರೊಳಗೆ ಆಧಾರ್ ಕಾರ್ಡ್‍ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದವರಿಗೆ ದಂಡ ವಿಧಿಸಲು ಸರಕಾರವು ಹೊಸ ವಿಭಾಗವನ್ನು(ಸೆಕ್ಷನ್ 234 ಎಚ್)ಆದಾಯ ತೆರಿಗೆ ಕಾಯ್ದೆ 1961ರಲ್ಲಿ ಸೇರಿಸಿದೆ.
ದಂಡದ ಮೊತ್ತವು 1,000ರೂ.ಗಿಂತ ಕಡಿಮೆ ಇರಬಹುದು. ಕಾನೂನಿನ ಪ್ರಕಾರ ಅದು ಹೆಚ್ಚಾಗುವುದಿಲ್ಲ. ನಿಗದಿತ ಗಡುವಿನೊಳಗೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ವಿಫಲವಾಗುವ ವ್ಯಕ್ತಿಗಳಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಸರಕಾರ ನಿರ್ದಿಷ್ಟಪಡಿಸುತ್ತದೆ.
ದಂಡ ಮಾತ್ರವಲ್ಲ, ವ್ಯಕ್ತಿಯ ಪ್ಯಾನ್ ಕಾರ್ಡ್ ಸಹ ನಿಷ್ಕ್ರೀಯವಾಗುತ್ತದೆ. ಪ್ಯಾನ್ ಕಾರ್ಡ್ ಅಗತ್ಯವಿರುವ ಪರಿಸ್ಥಿತಿಯಲ್ಲಿ ಓರ್ವ ವ್ಯಕ್ತಿಯು ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಸರಕಾರವು ಈ ಹಿಂದೆ ಹಲವಾರು ವಿಸ್ತರಣೆ ನೀಡಿದೆ. ಇನ್ನು ಮುಂದೆ ಗಡುವು ವಿಸ್ತರಣೆ ಸಾಧ್ಯತೆ ಅಸಂಭವ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾಗುವವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಅಮಾನ್ಯವಾಗುವ ಪಾನ್ ಕಾರ್ಡ್ ದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತದೆ. ವ್ಯಕ್ತಿಗಳಿಗೆ ಆದಾಯ ತೆರಿಗೆ ಸಲ್ಲಿಸಲು ಸಾಧ್ಯವಾಗುವುದಿಲ್ಲ.