ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದ್ದು, ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 43,846 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಈ ವರೆಗಿನ ಮತ್ತು ಕಳೆದ ವರ್ಷದ 112 ದಿನಗಳ ಗರಿಷ್ಠ ಸಂಖ್ಯೆಯಾಗಿದೆ.
ಕಳೆದ ವರ್ಷ ನವೆಂಬರ್ 29 ರಂದು ದೇಶದಲ್ಲಿ 41,810 ಕೇಸುಗಳು ದೃಢವಾಗಿದ್ದವು. ಆದ್ದ ಬಳಿಕ ಅತೀ ಹೆಚ್ಚಿನ ಪ್ರಕರಣಗಳು ಭಾನುವರ ದೃಢಪಟ್ಟಿದೆ.
ಇದೇ ವೇಳೆ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ (ಶೇ.62), ಕೇರಳ (ಶೇ.8.8), ಪಂಜಾಬ್ (ಶೇ.5.3) ನಲ್ಲಿ ಶೇ.76.22ರಷ್ಟು ಕೇಸುಗಳು ಇವೆ. ಈ ನಡುವೆ ಕೇರಳದಲ್ಲಿ ಸೋಂಕು ಪ್ರಮಾಣ ತಗ್ಗುತ್ತಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಕಳೆದ 11 ದಿನಗಳಿಂದ ಸೋಂಕು ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಫೆಬ್ರವರಿ 15ರಂದು ಕೇವಲ 1.35 ಲಕ್ಷಕ್ಕೆ ಇಳಿದಿದ್ದ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಇದೀಗ 3,09,087ಕ್ಕೆ ಏರಿಕೆಯಾಗಿದೆ. ಸೋಂಕಿತರಿನಿಂದ ಚೇತರಿಯಾಗುವವರ ಪ್ರಮಾಣ ಸೇ.96.12ಕ್ಕೆ ಕುಸಿದಿದೆ. ಇನ್ನೂ ಆತಂಕಕಾರಿ ವಿಚಾರವೆಂದರೆ ಭಾರತದಲ್ಲಿ ಕಳೆದ 4 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಗುರುವಾರ 35,871, ಶುಕ್ರವಾರ 39,726, ಶನಿವಾರ 40,953 ಕೇಸುಗಳು ದೃಢವಾಗಿವೆ.
ಭಾರತದಲ್ಲಿ ಈ ವರೆಗೆ 1,15,99,130 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಇವರಲ್ಲಿ 1,11,30,288 ಜನರು ಗುಣಮುಖರಾಗಿದ್ದಾರೆ.
ಭಾರತದಲ್ಲಿ ಒಂದೇ ದಿನ 11,33,602 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 23,35,65,119 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಇದೀಗ ಹಿರಿಯ ನಾಗರೀಕರಿಗೆ ಹಾಗೂ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೂ ಲಸಿಕೆ ನೀಡಲಾಗುತ್ತಿದೆ. ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 4,46,03,841 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.