ಬರ್ಲಿನ್ (ಜರ್ಮನಿ): ತನಗೆ ಹೊಸ ಉದ್ಯೋಗ ಸಿಕ್ಕಿತು ಎಂದು ಸ್ನೇಹಿತರಿಗೆಲ್ಲಾ ಹೇಳಿಕೊಳ್ಳುವ ಉಮೇದಿನಲ್ಲಿ ಯುವಕನೊಬ್ಬ ಮಾಡಿದ ಎಡವಟ್ಟಿನಿಂದ 44 ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ಘಟನೆ ಜರ್ಮನಿಯ ಕಾರಾಗೃಹದಲ್ಲಿ ನಡೆದಿದೆ.
ಅಷ್ಟಕ್ಕೂ ಆತ ಮಾಡಿದ್ದೇನೆಂದರೆ, ಸೆಲ್ಫಿ ತೆಗೆದುಕೊಂಡಿದ್ದು! ಬರ್ಲಿನ್ ಜೈಲಿನಲ್ಲಿ ಈ ಯುವಕನಿಗೆ ಕೆಲಸ ಸಿಕ್ಕಿದೆ. ತನಗೆ ಕೆಲಸ ಸಿಕ್ಕಿದ್ದನ್ನು ಎಲ್ಲರಿಗೂ ಹೇಳಿಕೊಳ್ಳುವ ಉತ್ಸಾಹದಲ್ಲಿದ್ದ ಈ ತರುಣ. ಆದ್ದರಿಂದ ಜೈಲಿನ ಒಳಗೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಫೋಟೋ ತೆಗೆದುಕೊಳ್ಳುವ ಉದ್ದೇಶವೇ ಬೇರೆಯವರಿಗೆ ತಿಳಿಯಲಿ ಎಂದಲ್ಲವೆ? ಅದಕ್ಕಾಗಿಯೇ ಈತ ತನ್ನ ಜಾಲತಾಣದ ಖಾತೆಗಳಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾನೆ.
ಆದರೆ ತಾನು ಎಂಥ ಎಡವಟ್ಟಿನ ಕೆಲಸ ಮಾಡಿದೆ ಎಂದು ಈ ಯುವಕನಿಗೆ ತಿಳಿಯಲೇ ಇಲ್ಲ. ಆತ ತೆಗೆದುಕೊಂಡಿರುವ ಸೆಲ್ಫಿಯ ಹಿಂಭಾಗದಲ್ಲಿ ಜೈಲಿನ ಸುಮಾರು 600 ಕೀಲಿಗಳು ಇದ್ದವು. ಈ ಸೆಕ್ಷನ್‌ನಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಹೇಳುವ ಉದ್ದೇಶದಿಂದ ಆ ಕೀ ಜತೆಗೇನೇ ಈತ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.
ಆದರೆ ಚಾಣಾಕ್ಷರಾದವರು ಫೋಟೋ ನೋಡಿಯೇ ನಕಲಿ ಕೀ ಮಾಡಬಲ್ಲರು. ಆದ್ದರಿಂದ ಈತ ಕ್ಲಿಕ್ಕಿಸಿಕೊಂಡಿರುವ ಫೋಟೋದಲ್ಲಿರುವ 600 ಕೀಲಿಗಳನ್ನು ನೋಡಿ ಯಾರಾದರೂ ಖದೀಮರು ಇಡೀ ಕಾರಾಗೃಹದ ಕೀಲಿಯನ್ನೇ ನಕಲಿ ಮಾಡುವ ಸಾಧ್ಯತೆ ಇತ್ತು.
ಆದ್ದರಿಂದ ಮೊದಲು ಯವಕನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದಕ್ಕೆ ಕಾರಣ, ಇಡೀ ಕಾರಾಗೃಹದ ಎಲ್ಲಾ 600 ಕೀಲಿಗಳನ್ನು ಈತನಿಂದಾಗಿ ಬದಲಿಸಬೇಕಾಗಿ ಬಂತು. ಅದಕ್ಕಾಗಿ ಖರ್ಚು ಮಾಡಿದ್ದು 44 ಲಕ್ಷ ರೂಪಾಯಿ! ಸೆಲ್ಫಿಯ ಹುಚ್ಚಿಗೆ ಸಿಕ್ಕ ಹೊಸ ಕೆಲಸವನ್ನೂ ಕಳೆದುಕೊಂಡು, ಸರ್ಕಾರದ ಬೊಕ್ಕಸಕ್ಕೂ ಹಾನಿ ಮಾಡಿದ ಈ ಯುವಕ!