ನವದೆಹಲಿ: ಕಳ್ಳಸಾಗಣೆಯ ಮೂಲಕ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ರವಾನಿಸಲು ಯತ್ನಿಸಿರುವ ಪ್ರಕರಣಗಳಲ್ಲಿ ಸುಮಾರು 4.76 ಲಕ್ಷ ಜಾನುವಾರುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಇಂಡೊ-ಬಾಂಗ್ಲಾ ಗಡಿ ಪ್ರದೇಶದಲ್ಲಿ 4.76 ಲಕ್ಷ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.
2016ರಲ್ಲಿ ಗಡಿ ಭಾಗದಲ್ಲಿ 1,68,801 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರೆ, 2017ರಲ್ಲಿ 1,19,299 ಜಾನುವಾರುಗಳು, 2018ರಲ್ಲಿ 63,716, 2019ರಲ್ಲಿ 77,410 ಹಾಗೂ 2020ರಲ್ಲಿ 46,809 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
'ಜಾನುವಾರು ಕಳ್ಳಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ ಬಿಎಸ್‌ಎಫ್, ಭಾರತ-ಬಾಂಗ್ಲಾದೇಶ ಗಡಿ ಭಾಗಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಎಲ್ಲ ಸಮಯದಲ್ಲಿಯೂ ಗಸ್ತು ತಿರುಗುವುದು, ನಾಕಾ ಹಾಕುವುದು, ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ವೀಕ್ಷಣಾ ನೆಲೆಗಳನ್ನು ಸ್ಥಾಪಿಸಲಾಗಿದೆ' ಎಂದು ಸಚಿವ ನಿತ್ಯಾನಂದ ರೈ ಉತ್ತರದಲ್ಲಿ ತಿಳಿಸಿದ್ದಾರೆ.
'ಇಂಡೊ-ಬಾಂಗ್ಲಾ ಗಡಿ ಪ್ರದೇಶದ ಜಾನುವಾರು ಕಳ್ಳಸಾಗಣೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಭಾಗಿಯಾಗಿರುವುದು ತಿಳಿದು ಬಂದರೆ, ಭದ್ರತಾ ಪಡೆಯು ತನಿಖೆ ಕೈಗೊಳ್ಳುತ್ತದೆ ಹಾಗೂ ನಿಯಮಗಳ ಅನುಸಾರ ಸೂಕ್ತ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.