ನವದೆಹಲಿ: ಸೋಮವಾರ ಬೆಳಗ್ಗೆಯಿಂದಲೂ ಸುಮಾರು 50 ಲಕ್ಷ ಜನರು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಮಂಗಳವಾರ ಮಧ್ಯಾಹ್ನದವರೆಗೂ 60 ವರ್ಷಕ್ಕೂ ಮೇಲ್ಪಟ್ಟ ಅಥವಾ ಗಂಭೀರವಾದಂತಹ ಸಮಸ್ಯೆಗಳಿಂದ ಬಳಲುತ್ತಿರುವ 45ರಿಂದ 60 ವರ್ಷಕ್ಕೂ ಕೆಳಗಿನ ಸುಮಾರು 2.08 ಲಕ್ಷ ಫಲಾನುಭವಿಗಳು ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರುವುದಾಗಿ ಸರ್ಕಾರ ತಿಳಿಸಿದೆ.
ಮೊದಲ ಎರಡು ಹಂತಗಳಲ್ಲಿ ಮಂಗಳವಾರ ಮಧ್ಯಾಹ್ನದವರೆಗೂ 1,48,55,073 ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 67,04,856 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. 25,98,192 ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಇದಲ್ಲದೇ, 53, 43,219 ಮುಂಚೂಣಿ ಕಾರ್ಯಕರ್ತರು ಈವರೆಗೂ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು. ಕೋವಿನ್ ಪೋರ್ಟಲ್ ವ್ಯವಸ್ಥೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹಿರಿಯ ಅಧಿಕಾರಿ ಆರ್ ಎಸ್ ಶರ್ಮಾ
ತಿಳಿಸಿದ್ದಾರೆ.
ಲಸಿಕೆ ಪಡೆಯಲು ಸಾರ್ವಜನಿಕರು ಮುಂದೆ ಬರಬೇಕು, ಜನ ದಟ್ಟಣೆ ಉಂಟಾಗದೆ, ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಜನರಲ್ಲಿ ಮನವಿ ಮಾಡಿದ್ದಾರೆ.