ಢಾಕಾ: ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರೆತು 50 ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ನೇಪಾಳ, ಶ್ರೀಲಂಕಾ, ಭೂತಾನ್ ಹಾಗೂ ಮಾಲ್ಡೀವ್ಸ್‌ನ ಪ್ರಧಾನಿಗಳು ಸೇರಿದಂತೆ ವಿಶ್ವದ ಪ್ರಸಿದ್ಧ ನಾಯಕರು ತಿಂಗಳಾಂತ್ಯದಲ್ಲಿ ಢಾಕಾಕ್ಕೆ ಭೇಟಿ ನೀಡಲಿದ್ದಾರೆ.
ಮಾರ್ಚ್ 17ರಿಂದ 27ರವರೆಗೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದೆ. 1971ರ ವಿಮೋಚನಾ ಯುದ್ಧದ ನಂತರ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂಭ್ರಮದ ಜೊತೆಗೆ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವವೂ ನಡೆಯಲಿದೆ.
ಮಾಲ್ಡೀವ್ಸ್ ಪ್ರಧಾನಿ ಇಬ್ರಾಹಿಂ ಮೊಹಮದ್ ಸೊಲಿ ಮಾರ್ಚ್ 17ರಿಂದ ಮೂರು ದಿನಗಳ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.ನಂತರ ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷ ಮಾರ್ಚ್ 19ರಂದು ಎರಡು ದಿನ, ನೇಪಾಳ ಪ್ರಧಾನಿ ವಿದ್ಯಾ ದೇವಿ ಭಂಡಾರಿ 22ಕ್ಕೆ ಎರಡು ದಿನ ಹಾಗೂ ಭೂತಾನ್ ಪ್ರಧಾನಿ ಲೊಟೆ ಶೆರಿಂಗ್ ಮಾರ್ಚ್ 24ರಿಂದ 25ರವರೆಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 26ರಂದು ಬರಲಿದ್ದು, ಬಾಂಗ್ಲಾದೇಶ- ಭಾರತದ 50 ವರ್ಷಗಳ ರಾಜತಾಂತ್ರಿಕ ಸಂಬಂಧದ ದ್ಯೋತಕವಾಗಿ ಸ್ವಾತಂತ್ರ್ಯೋತ್ಸವದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.