ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆ ಅಂಗವಾಗಿ ಮತಯಾಚನೆಗಾಗಿ ಮನೆ ಸಂದರ್ಶನ ನಡೆಸುವ ವೇಳೆ ಅಭ್ಯರ್ಥಿ ಜೊತೆ 5 ಮಂದಿಗೆ ಮಾತ್ರ ಅನುಮತಿ ಇರುವುದು ಎಂದು ಚುನಾವಣೆ ಆಯೋಗ ತಿಳಿಸಿದೆ .
ಮನೆಯೊಳಕ್ಕೆ ಪ್ರವೇಶ ನಡೆಸಕೂಡದು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಕಡ್ಡಾಯವಾಗಿದೆ. ಮಾಸ್ಕ್ ಸರಿಸಿ ಯಾರೊಂದಿಗೂ ವ್ಯವಹರಿಸಕೂಡದು. ಸಾನಿಟೈಸರ್ ಆಗಾಗ ಬಳಸುತ್ತಿರಬೇಕು.
ಕ್ವಾರೆಂಟೈನ್ ಪಾಲನೆಯಲ್ಲಿರುವ ಮನೆಗಳಲ್ಲಿ, ಕೋವಿಡ್ ರೋಗಿಗಳು, ಗರ್ಭಿಣಿಯರು, ವಯೋವೃದ್ಧರು, ಗಂಭೀರ ರೋಗಿಗಳು ಇರುವ ಮನೆಗಳಲ್ಲಿ ಮತಯಾಚನೆ ಸಂದರ್ಶನ ವೇಳೆ ವಿಶೇಷ ಗಮನ ಹರಿಸಬೇಕು. ಗ್ಲೌಸ್, ಮಾಸ್ಕ್ ಇತ್ಯಾದಿಗಳನ್ನು ಬಳಕೆಯ ನಂತರ ಸೂಕ್ತ ರೀತಿ ಸಂಸ್ಕರಣೆ ನಡೆಸಬೇಕು.
ಸಭೆಗಳು ನಡೆಯುವ ಸಭಾಂಗಣ ಇತ್ಯಾದಿ ಕಡೆ ಕೈತೊಳೆಯುವ ವ್ಯವಸ್ಥೆ, ಸಾಬೂನು, ನೀರು. ಶೌಚಾಲಯ, ವಿಶ್ರಾಂತಿ ಕೊಠಡಿ ಇತ್ಯಾದಿ ಇರುವುದನ್ನು ಖಚಿತಪಡಿಸಬೇಕು. ಎ.ಸಿ. ಬಳಸಕೂಡದು. ಕಿಟಿಕಿ ತೆರೆದಿದ್ದು ಸೂಕ್ತ ಪ್ರಮಾಣದಲ್ಲಿ ಗಾಲಿ-ಬೆಳಕು ಸಂಚರಿಸುವ ವ್ಯವಸ್ಥೆ ಇರಬೇಕು.
ಶೀತ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವ ಮಂದಿ ಪ್ರಚಾರ ಚಟುವಟಿಕೆಗಳಿಗೆ ತೆರಳಕೂಡದು. ಮೆರವಣಿಗೆ, ಸಭೆ ಇತ್ಯಾದಿಗಳು ಕೋವಿಡ್ ಸಂಹಿತೆ ಕಡ್ಡಾಯವಾಗಿ ಪಾಲಿಸಿ ನಡೆಸಬೇಕು. ಸಾರ್ವಜನಿಕ ಸಭೆ ನಡೆಯುವ ಮೈದಾನಗಳಲ್ಲಿ ಪ್ರವೇಶ ಮತ್ತು ನಿರ್ಗಮನಗಳಿಗೆ ಪ್ರತ್ಯೇಕ ದಾರಿ ಇರಬೇಕು. ಥರ್ಮಲ್ ಸ್ಕಾನಿಂಗ್, ಮಾಸ್ಕ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಈ ಕಡೆಗಳಲ್ಲಿ ಕಾಯ್ದುಕೊಳ್ಳಬೇಕು.