ನವದೆಹಲಿ: ಪ್ರಕೃತಿ ವಿಕೋಪಗಳ ಕಾರಣ 6.19 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳುವುದು ಭಾರತದ ಮುಂಚೂಣಿ ಬ್ಯಾಂಕುಗಳಿಂದ ಸಾಧ್ಯವಾಗಿಲ್ಲ ಎಂದು ಸಿಡಿಪಿ ಇಂಡಿಯಾ ವಾರ್ಷಿಕ ವರದಿ 2020 ಉಲ್ಲೇಖಿಸಿದೆ.
ಪ್ರವಾಹ, ಬರ ಮತ್ತು ಸೈಕ್ಲೋನ್ ಮುಂತಾದ ಹವಾಮಾನ ವೈಪರೀತ್ಯ ಅಪಾಯಗಳ ಕಾರಣ ದೇಶದ ಮುಂಚೂಣಿ ಬ್ಯಾಂಕ್ ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಏಕ್ಸಿಸ್ ಬ್ಯಾಂಕುಗಳು ಸಾಲ ವಸೂಲಾತಿ ಸಂಕಷ್ಟವನ್ನು ಎದುರಿಸಿವೆ. ಸಿಮೆಂಟ್, ಕಲ್ಲಿದ್ದಲು, ತೈಲ ಮತ್ತು ವಿದ್ಯುತ್ ಮುಂತಾದ ಪರಿಸರ ಸೂಕ್ಷ್ಮ ಉದ್ಯಮಗಳಿಗೆ ಬ್ಯಾಂಕುಗಳು ಸಾಲ ನೀಡಿದ್ದವು. ಪ್ರಕೃತಿ ವಿಕೋಪದ ಕಾರಣ ನಷ್ಟ ಅನುಭವಿಸಿರುವ ಈ ಉದ್ಯಮಗಳು ಸಾಲ ಮರುಪಾವತಿ ಸರಿಯಾಗಿ ಮಾಡಿಲ್ಲ. ಬ್ಯಾಂಕುಗಳಿಗೆ ಭಾರತದ 67 ಟಾಪ್ ಕಂಪನಿಗಳು ಒಟ್ಟು 97 ಶತಕೋಟಿ ಡಾಲರ್ ಸಾಲ ಮರುಪಾವತಿಸಬೇಕು. ಒಟ್ಟು ಸಾಲ ವಸೂಲಾತಿ ಸಂಕಷ್ಟದಲ್ಲಿ ಈ ಪಾಲು ಶೇಕಡ 87 ಇದೆ ಎಂದು ಸಿಡಿಪಿ ವರದಿ ತಿಳಿಸಿದೆ.
'ಉದ್ಯಮಗಳಿಗೆ ದೀರ್ಘಾವಧಿಯಲ್ಲಿ ಅತಿದೊಡ್ಡ ಅಪಾಯ ತಂದೊಡ್ಡುವುದು ಹವಾಮಾನ ವೈಪರೀತ್ಯಗಳೇ ಆಗಿವೆ. ಹಣಕಾಸು ಸಂಸ್ಥೆಗಳು ಅದನ್ನು ಈಗಷ್ಟೇ ಅರ್ಥಮಾಡಿಕೊಳ್ಳತೊಡಗಿವೆ'
ದಮನ್ದೀಪ್ ಸಿಂಗ್, ಸಿಡಿಪಿ ಇಂಡಿಯಾದ ನಿರ್ದೇಶಕ
ಯಾವ ಬ್ಯಾಂಕ್, ಎಷ್ಟು ಸಾಲ?
ಎಸ್ಬಿಐ: ರೂ 3.83 ಲಕ್ಷ ಕೋಟಿ
ಎಚ್ಡಿಎಫ್ಸಿ: ರೂ1.79 ಲಕ್ಷ ಕೋಟಿ
ಇಂಡಸ್ಇಂಡ್ ಬ್ಯಾಂಕ್: ರೂ 46,600 ಕೋಟಿ
ಏಕ್ಸಿಸ್ ಬ್ಯಾಂಕ್: ರೂ 7500 ಕೋಟಿ
ಯೆಸ್ ಬ್ಯಾಂಕ್, ರೂ 2000, ಕೋಟಿ.