ಲಂಡನ್: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ಮತ್ತೊಮ್ಮೆ ತಗುಲುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ಕೋವಿಡ್‌ನಿಂದ ಬಳಲಿ ಗುಣಮುಖರಾದವರ ಪೈಕಿ 65 ವರ್ಷ ಮೇಲ್ಪಟ್ಟವರು ಪುನಃ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಡನ್ಮಾರ್ಕ್ ವಿಜ್ಞಾನಿಗಳು ನಡೆಸಿರುವ ಅಧ್ಯಯನ ಹೇಳಿದೆ.
ಕಳೆದ ವರ್ಷ 40 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 65 ವರ್ಷಕ್ಕಿಂತ ಕೆಳಗಿನವರಲ್ಲಿ ಮತ್ತೊಮ್ಮೆ ಸೋಂಕು ತಗುಲುವುದರ ವಿರುದ್ಧ ಶೇ.80 ರಷ್ಟು ರಕ್ಷಣೆ ಕಂಡುಬಂದಿತ್ತು.
ಅಧ್ಯಯನದ ಭಾಗವಾಗಿದ್ದವರ ವಯಸ್ಸು, ಲಿಂಗ ಹಾಗೂ ಎಷ್ಟು ದಿನಗಳವರೆಗೆ ಸೋಂಕು ಇತ್ತು ಎಂಬ ಅಂಶಗಳನ್ನು ಬಳಸಿ ವಿಶ್ಲೇಷಣೆ ಮಾಡಲಾಗಿದೆ.ಈ ವಿಶ್ಲೇಷಣೆ ಆಧಾರಾದಲ್ಲಿ ಮರು ಸೋಂಕಿನ ಸಾಧ್ಯತೆ ಎಷ್ಟು ಎಂಬುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.
65 ವರ್ಷ ಮೇಲ್ಪಟ್ಟವರಲ್ಲಿ ಶೇ.47ರಷ್ಟು ರಕ್ಷಣೆ ಗೋಚರಿಸಿತ್ತು. ಹೀಗಾಗಿ 65 ವರ್ಷ ಮೇಲ್ಪಟ್ಟವರು ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ನೌಕರರಿಗೆ ಕೊರೊನಾ ಲಸಿಕೆ ನೀಡಲಾಯಿತು. ಬಳಿಕ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ 40 ವರ್ಷ ಮೇಲ್ಪಟ್ಟ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆದ್ಯತೆ ನೀಡಲಾಯಿತು.