ನವದೆಹಲಿ: ಪ್ರಾಥಮಿಕ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದ್ದು, ನಿಗದಿಪಡಿಸಿದ ಅವಧಿಗೆ ಮುನ್ನವೇ 70 ಸಾವಿರ ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಇದುವರೆಗೆ ಸುಮಾರು 41.35 ಕೋಟಿ ಮಂದಿ ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸೇವೆ ಪಡೆದಿದ್ದಾರೆ. ಇವರಲ್ಲಿ ಶೇಕಡ 54ರಷ್ಟು ಮಹಿಳೆಯರು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ನಡುವೆಯೂ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದೆ.
ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆರಂಭಿಸುವ ಯೋಜನೆಯನ್ನು 2018ರ ಏಪ್ರಿಲ್‌ನಲ್ಲಿ ಆರಂಭಿಸಲಾಯಿತು. 2022ರ ಡಿಸೆಂಬರ್ ವೇಳೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ 1.50 ಲಕ್ಷ ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸದ್ಯ ಇರುವ ಆರೋಗ್ಯ ಸೇವೆಗಳ ಜತೆಗೆ ಮಾನಸಿಕ ಆರೋಗ್ಯ, ನೇತ್ರ ಚಿಕಿತ್ಸೆ, ಕಿವಿ, ಗಂಟಲು, ಮೂಗಿಗೆ ಸಂಬಂಧಿಸಿದಂತೆ ಚಿಕಿತ್ಸೆಗಳನ್ನು ಈ ಕೇಂದ್ರಗಳಲ್ಲಿ ಒದಗಿಸಲಾಗುವುದು ಎಂದು ತಿಳಿಸಿದೆ.