ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಬಿಂಬಿಸುವ ಜೊತೆಗೆ 1947ರಿಂದ ಆಗಿರುವ ಸಾಧನೆಗಳನ್ನು ವಿಶ್ವಕ್ಕೇ ತಿಳಿಸುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ 259 ಸದಸ್ಯರ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಮಾತನಾಡಿದ, ಸಂಭ್ರಮಾಚರಣೆಗೆ ಜನರ ಪಾಲ್ಗೊಳ್ಳುವಿಕೆಯೂ ಇರಬೇಕು ಎಂದು ಹೇಳಿದರು.
1947ರಿಂದ ಆಗಿರುವ ಸಾಧನೆಗಳನ್ನು ವಿಶ್ವದ ಎದುರು ತೆರೆದಿಡಲು ಇದೊಂದು ಸದವಕಾಶ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಿತಿಯ ಸದಸ್ಯರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮುಖ್ಯ ನ್ಯಾಯಮೂರ್ತಿ ಎಸ್..ಎ.ಬೊಬಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, 28 ಮುಖ್ಯ ಮಂತ್ರಿಗಳು, ಗಾಯಕಿ ಲತಾ ಮಂಗೇಷ್ಕರ್, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ನೊಬೆಲ್ ಪ್ರಶಸ್ತ್ರಿ ಪುರಸ್ಕೃತ ಅಮರ್ಥ್ಯ ಸೆನ್, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಹಲವು ಕೇಂದ್ರ ಸಚಿವರು, ರಾಜ್ಯಪಾಲರುಗಳು ಇದ್ದಾರೆ.
ವಿರೋಧಪಕ್ಷಗಳ ನಾಯಕರಾದ ಕಾಂಗ್ರೆಸ್‌ನ ಸೋನಿಯಾಗಾಂಧಿ, ಸಿಪಿಎಂನ ಸೀತಾರಾಂ ಯೆಚೂರಿ, ಎನ್.ಸಿ.ಪಿ. ನಾಯಕ ಶರದ್ ಪವಾರ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಅವರೂ ಸದಸ್ಯರಾಗಿದ್ದಾರೆ.