ತಿರುವನಂತಪುರ: ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ನಡುವೆಯೂ ಆಡಳಿತಾರೂಢ ಸಿಪಿಎಂ ಬುಧವಾರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
83 ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಅವರು, ವಿವಿಧ ಗೆಲುವಿನ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಕೆಲವು ಅಭ್ಯರ್ಥಿಗಳ ಬಗ್ಗೆ ಆಕ್ಷೇಪ ಹೊಂದಿರುವ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಿಪಿಎಂಗೆ ಬೆಂಬಲ ನೀಡಿದ್ದ ಒಂಬತ್ತು ಪಕ್ಷೇತರರು, ಬಂಡಾಯ ನಾಯಕ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಹಾಗೂ 12 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 83 ಅಭ್ಯರ್ಥಿಗಳನ್ನು ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ.
ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಕಾರ್ಮಿಕ ಸಚಿವ ಜಿ ಸುಧಾಕರನ್ ಸೇರಿದಂತೆ ಐವರು ಹಾಲಿ ಸಚಿವರು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಪಿಎ ಮೊಹಮ್ಮದ್ ರಿಯಾಸ್ ಅವರಿಗೆ ಬೇಪೂರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.