ನವದೆಹಲಿ: 'ನೀವು ಆಕೆಯನ್ನು ಮದುವೆಯಾಗಲು ಸಿದ್ಧರಿದ್ದೀರಾ...?' ಎಂದು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಸರ್ಕಾರಿ ನೌಕರರೊಬ್ಬರಿಗೆ ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತು.
ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬಡೆ ಅವರಿದ್ದ ಪೀಠ, ನೀವು ಆಕೆಯನ್ನು ಮದುವೆಯಾಗಲು ಸಿದ್ಧರಿದ್ದೀರಾ? ನೀವು ಆಕೆಯನ್ನು ಮದುವೆಯಾಗಲು ಸಿದ್ಧರಿದ್ದರೆ ನಾವು ಜಾಮೀನು ನೀಡುವ ಬಗ್ಗೆ ಪರಿಗಣಿಸಬಹುದು, ಇಲ್ಲದಿದ್ದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ" ಆದರೆ ನಾವು ಮದುವೆಯಾಗುವಂತೆ ಒತ್ತಾಯಿಸುವುದಿಲ್ಲ ಎಂದು ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಆರೋಪಿ ಮೊದಲಿಗೆ ಬಾಲಕಿಯನ್ನು ಮದುವೆಯಾಗಲು ಸಿದ್ಧರಿದ್ದರು. ಆದರೆ ಆಕೆ ನಿರಾಕರಿಸಿದ್ದರು. ಹೀಗಾಗಿ ಆರೋಪಿ ಈಗ ಬೇರೊಬ್ಬರನ್ನು ಮದುವೆಯಾಗಿದ್ದಾನೆ ಎಂದು ಹೇಳಿದರು.
'ನೀವು ಸರ್ಕಾರಿ ನೌಕರ ಎಂಬುದು ನಿಮಗೆ ಗೊತ್ತಿತ್ತು. ಆದರೆ ಎಳೆ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯವೆಸಗುವ ಮುನ್ನ ಆ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಕೋರ್ಟ್ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳು ಇನ್ನೂ ದಾಖಲಾಗಿಲ್ಲ ಎಂದು ಆರೋಪಿ ಪರ ವಕೀಲರು ತಿಳಿಸಿದ ನಂತರ, ನೀವು ನಿಯಮಿತ ಜಾಮೀನುಗಾಗಿ ಅರ್ಜಿ ಸಲ್ಲಿಸಬಹದು ಎಂದ ಕೋರ್ಟ್, ಆರೋಪಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ 2020ರ ಜನವರಿ 6ರಂದು ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ನ ಫೆ. 5ರ ಅದೇಶವನ್ನು ಮಹಾರಾಷ್ಟ್ರ ವಿದ್ಯುತ್ ನಿಗಮದ ನೌಕರ, 23 ವರ್ಷದ ಆರೋಪಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.