ಬದಿಯಡ್ಕ: ಅಡಿಪಾಯ ಭದ್ರವಾದರೆ ಭವಿಷ್ಯ ಸುಭದ್ರವಾಗುತ್ತದೆ. ಮಕ್ಕಳಿಗಾಗಿ ಹಣಕೂಡಿಡದೆ ಉತ್ತಮವಿದ್ಯಾಭ್ಯಾಸವನ್ನು, ನೈತಿಕ ಶಿಕ್ಷಣವನ್ನು ನೀಡಬೇಕು. ಹಾಗಾದಲ್ಲಿ ಮಾತ್ರ ಅವರು ನಾಳಿನ ಉತ್ತಮ ಪ್ರಜೆಗಳಾಗಿ, ನಮ್ಮ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಅಭಿಪ್ರಾಯಪಟ್ಟರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 10ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ `ಸ್ಪಂದನ' ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಇಂದು ಪಡೆದ ವಿದ್ಯಾಭ್ಯಾಸವು ಮುಂದಿನ ಜೀವನವನ್ನು ಸುಗಮವಾಗಿ ಕೊಂಡೊಯ್ಯುವಲ್ಲಿ ನೆರವಾಗುತ್ತದೆ. ತಪ್ಪುಗಳು ಜೀವನದಲ್ಲಿ ಸಹಜ, ಅದಕ್ಕೆ ಕ್ಷಮೆಯಿರುತ್ತದೆ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ಮಾತ್ರ ಸನ್ಮಾರ್ಗದತ್ತ ತೆರಳಲು ಸಾಧ್ಯವಿದೆ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಪುನರಾವರ್ತಿಸಬಾರದು ಎಂದು ಮಕ್ಕಳಿಗೆ ಹಿತನುಡಿಗಳನ್ನಾಡುತ್ತಾ ಉರಿಯುವ ದೀಪವನ್ನು ಆಧಾರತಟ್ಟೆಯೊಂದಿಗೆ ನೀಡಿ ಲೋಕವನ್ನು ಬೆಳಗುವ ವ್ಯಕ್ತಿಗಳಾಗಿ ನೀವು ರೂಪುಗೊಳ್ಳಬೇಕು ಎಂದು ಆಶೀರ್ವದಿಸಿದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಮಾತೃಸಮಿತಿ ಅಧ್ಯಕ್ಷೆ ಪ್ರಮೀಳಾ ಗೋಸಾಡ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ ಶುಭಾಶಂಸನೆಗೈದು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ತರಗತಿಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ `ಅಗ್ರೇಸರ' ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ದಿ.ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಬಿ ಅವರು ಕಳೆದ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಉತ್ತಮ ವಿದ್ಯಾರ್ಥಿಗೆ ಪ್ರತೀವರ್ಷ ಕೊಡಮಾಡುವ ಚಿನ್ನದ ಪದಕ `ಸ್ವರ್ಣಾಂಕುರ' ಹಾಗೂ ಪ್ರಶಸ್ತಿಯನ್ನು ಪ್ರತಿಕಾ ಕೆ. ಪಡೆದುಕೊಂಡು ಶಾಲಾ ಜೀವನಾನುಭವಗಳನ್ನು ಹಂಚಿಕೊಂಡಳು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪಾಲಕರು ಮಾತನಾಡಿದರು. ವಿದ್ಯಾರ್ಥಿಗಳಾದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಸ್ವಾಗತಿಸಿ, ನೇತ್ರಾ ಎಂ. ಧನ್ಯವಾದವನ್ನಿತ್ತರು. ಶ್ರದ್ಧಾ ಬಳ್ಳಂಬೆಟ್ಟು ನಿರೂಪಿಸಿದರು.