ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ನಿರ್ಮಾಣಗೊಂಡ ಉಳ್ಳಾಲ ನೇತ್ರಾವತಿ ಸೇತುವೆಯ ತಡೆಬೇಲಿ ಹಾಗೂ ಸಿಸಿ ಕ್ಯಾಮರಾಗಳ ಉದ್ಘಾಟನೆಯು ಬುಧವಾರ ನಡೆಯಿತು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ತಡೆಬೇಲಿ ಹಾಗೂ ಸಿಸಿ ಕ್ಯಾಮರಾ ಸೌಲಭ್ಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಮುಖ ಹೆದ್ದಾರಿ ಮಧ್ಯೆಯ ಈ ಸೇತುವೆಯು ಆತ್ಮಹತ್ಯೆಯ ತಾಣವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇಲ್ಲಿ ಅನೇಕ ದುರ್ಘಟನೆಗಳು ನಡೆದಿತ್ತು. ಇದಕ್ಕೆ ಕಡಿವಾಣ ಹಾಕಲು ಶಾಸಕರ ಕೋರಿಕೆಯ ಮೇರೆಗೆ ಮುಡಾದ ವ್ಯಾಪ್ತಿಗೆ ಬಾರದಿದ್ದರೂ ಕೂಡ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಎರಡೂ ಸೇತುವೆಯ ಎರಡೂ ಕಡೆಯಲ್ಲಿ ತಲಾ 700ರಂತೆ ಸುಮಾರು 2,800 ಮೀ. ಉದ್ದದ ತಡೆಬೇಲಿ ನಿರ್ಮಿಸಲಾಗಿದೆ. ಸಿಸಿ ಕ್ಯಾಮರಾವನ್ನು ಕೂಡ ಹಾಕಲಾಗಿದೆ. ಆ ಮೂಲಕ ಮುಡಾ ಜನಸ್ನೇಹಿ ಕೆಲಸ ಮಾಡಿಸಿದ ತೃಪ್ತಿ ಇದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್, ಮುಡಾ ಆಯುಕ್ತ ದಿನೇಶ್ ಕುಮಾರ್, ಮನಪಾ ಸದಸ್ಯರಾದ ವೀಣಾ ಮಂಗಳ, ಭಾಸ್ಕರ್ ಚಂದ್ರ ಶೆಟ್ಟಿ, ರೇವತಿ ಶ್ಯಾಮ್ ಸುಂದರ್, ಭಾನುಮತಿ ಮತ್ತಿತರರು ಉಪಸ್ಥಿತರಿದ್ದರು.