ನವದೆಹಲಿ: ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರ ಹರಿದ ಜೀನ್ಸ್ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ, ನಿತಿನ್ ಗಡ್ಕರಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಫೋಟೋಗಳನ್ನು ಟ್ವೀಟ್ ಮಾಡಿ, ಓ ದೇವರೇ ಮೊಣಕಾಲು ಕಾಣುತ್ತಿದೆ ಎಂದು ಬರೆಯುವ ಮೂಲಕ ತಿರತ್ ಸಿಂಗ್ ರಾವತ್ ಗೆ ತಿರುಗೇಟು ನೀಡಿದ್ದಾರೆ.
ಹರಿದ ಜೀನ್ಸ್ ಧರಿಸಿದ ಮಹಿಳೆಯರ ಬಗ್ಗೆ ಮುಖ್ಯಮಂತ್ರಿ ರಾವತ್ ಪ್ರತಿಕ್ರಿಯಿಸಿದ ನಂತರ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.
ನಾನು ಒಮ್ಮೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದಲ್ಲಿ ಮಹಿಳೆಯೊಬ್ಬರು ಕುಳಿತಿದ್ದರು. ಆಕೆ ಬೂಟ್ಸ್ ಧರಿಸಿದ್ದರು. ಧರಿಸಿದ ಜೀನ್ಸ್ ಮೊಣಕಾಲಿನ ಭಾಗದಲ್ಲಿ ಹರಿದಿತ್ತು. ಅವರು ಎನ್ ಜಿಒ ನಡೆಸುತ್ತಿದ್ದರು. ಮೊಣಕಾಲಿನ ಭಾಗದಲ್ಲಿ ಹರಿದಿರುವ ಜೀನ್ಸ್ ಧರಿಸುತ್ತೀರಿ, ಸಮಾಜದಲ್ಲಿ ಓಡಾಡುತ್ತೀರಿ, ನಿಮ್ಮ ಮಕ್ಕಳು ನಿಮ್ಮ ಜತೆಯಲ್ಲಿದ್ದಾರೆ. ನೀವು ಯಾವ ಮೌಲ್ಯವನ್ನು ಹೇಳಿಕೊಡುತ್ತಿದ್ದೀರಿ ಎಂದು ರಾವತ್ ಪ್ರಶ್ನಿಸಿದ್ದರಂತೆ.
ರಿಪ್ಡ್ ಜೀನ್ಸ್ ಸ್ಟೈಲ್ ಅನ್ನು ಕತ್ತರಿ ಸಂಸ್ಕೃತಿ ಎಂದು ರಾವತ್ ಕರೆದಿದ್ದರು. ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸಿದರೆ ಶ್ರೀಮಂತರು ಎಂದೆನಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.