ಕುಂಬಳೆ: ಬೆಂಗಳೂರಿನ ವಿ.ಕೆ.ಎಂ. ಕಲಾವಿದರು ಹೊರನಾಡ ರಂಗಭೂಮಿ ಕಲಾವಿದರಿಗೆ ಕೊಡಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಕಾಸರಗೋಡಿನ ಖ್ಯಾತ ರಂಗಭೂಮಿ ಕಲಾವಿದೆ ಜಯಶ್ರೀ ದಿವಾಕರ್ ಭಾಜನರಾಗಿದ್ದಾರೆ.
ವಿ.ಕೆ.ಎಂ. ಕಲಾವಿದರು ಸಂಸ್ಥೆಯ 40 ರ ಸಂಭ್ರಮದಲ್ಲಿ ಮಾ.18 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 1982 ರಲ್ಲಿ ಕಾಸರಗೋಡಿನ ಖ್ಯಾತ ಪ್ರಸಾದನ ಕಲಾವಿದ ಮತ್ತು ನಿರ್ದೇಶಕ ವೇಣು ಕಾಸರಗೋಡು ರಚಿಸಿ ನಿರ್ದೇಶಿಸಿದ ಪ್ರಶಸ್ತಿ ಎಂಬ ನಾಟಕದಲ್ಲಿ ಬಾಲನಟಿಯಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಜಯಶ್ರೀ ದಿವಾಕರ್ ಕಾಸರಗೋಡಿನ ಗಡಿನಾಡ ಕಲಾವಿದರು ಹವ್ಯಾಸಿ ರಂಗ ಸಂಸ್ಥೆಯಲ್ಲಿ ಸದಸ್ಯೆಯಾಗಿ ತಂಡವು ಪ್ರಯೋಗಿಸಿದ ಹಲವು ಕನ್ನಡ ಮತ್ತು ತುಳು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಪ್ರಸ್ತುತ ನೃತ್ಯ ಸಂಗೀತ ತರಬೇತಿ ನೀಡುವ ಕಾಸರಗೋಡಿನ ಅಶೋಕ ನಗರದ ಕಲಾ ಸಂಗಮ ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿ ಪರಿಸರದ ಮಕ್ಕಳಿಗೆ ಜಾನಪದ ನೃತ್ಯ, ಸಮೂಹ ನೃತ್ಯಗಳಲ್ಲಿ ತರಬೇತಿ ನೀಡುತ್ತಿದ್ದಾರೆ. 2000-2005 ರ ಸಾಲಿನಲ್ಲಿ ಕಾಸರಗೋಡು ನಗರಸಭೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದರು.
ಕತ್ತಲು ದಾರಿ ದೂರ, ಭಗವದಜ್ಜುಕೀಯ, ಹಯವದನ, ಗಾಂಧಾರಿ, ರಾಜ್ಯದಾಹ, ಸತ್ಯ ಹರಿಶ್ಚಂದ್ರ, ಮಾರೀಚನ ಬಂಧುಗಳು, ಅಂಧಯುಗ, ಬಸ್ತಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಯವದನ ಮತ್ತು ಬಸ್ತಿ ನಾಟಕಗಳಲ್ಲಿನ ಅಭಿನಯಕ್ಕೆ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ರಂಗಭೂಮಿಯ ಸೇವೆಗಾಗಿ ಹಲವೆಡೆ ಸಮ್ಮಾನ, ಅಭಿನಂದನೆ ಸ್ವೀಕರಿಸಿದ್ದಾರೆ.