ನವದೆಹಲಿ: ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗಲಿದೆ.
ಅಮೆರಿಕ ಒಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ಮಾಡಿದ್ದಾರೆ.
ಬಿಸಿಲಿನ ತಾಪದಿಂದ ಕಾರ್ಮಿಕರಿಗೆ ಅಸುರಕ್ಷಿತ ವಾತಾವರಣ ಸೃಷ್ಟಿಯಾಗಲಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರಾವಳಿ ಪ್ರದೇಶ ಹಾಗೂ ಕೋಲ್ಕತ್ತ, ಮುಂಬೈ ಮತ್ತು ಹೈದರಾಬಾದ್ ನಗರಗಳಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ದಕ್ಷಿಣ ಏಷ್ಯಾದ ಭವಿಷ್ಯ ಕೆಟ್ಟದಾಗಿ ಕಾಣಿಸುತ್ತಿದೆ. ಆದರೆ, ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ನಿಯಂತ್ರಿಸುವ ಅವಕಾಶವಿದೆ. ತಾಪಮಾನವನ್ನು ಕಡಿಮೆ ಮಾಡುವ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಭವಿಷ್ಯದ ಬದಲು ಈಗಿನಿಂದಲೇ ತಾಪಮಾನ ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಅಧ್ಯಯನ ತಂಡದಲ್ಲಿದ್ದ ಮೊಟಾಸಿಮ್ ಅಷ್‌ಫಾಕ್ ತಿಳಿಸಿದ್ದಾರೆ.
'ಕೈಗಾರಿಕಾ ಕ್ರಾಂತಿಯಾದ ಬಳಿಕ ಒಟ್ಟಾರೆಯಾಗಿ ಭೂಮಂಡಲದ ತಾಪಮಾನ 1 ಡಿಗ್ರಿ ಸೆಲ್ಸಿಯಷ್ಟು ಹೆಚ್ಚಾಯಿತು. 2040ರ ವೇಳೆಗೆ ಇದು 1.5 ಡಿಗ್ರಿ ಸೆಲ್ಸಿಯಷ್ಟು ಹೆಚ್ಚಲಿದೆ. ಕೇವಲ ಅರ್ಧದಷ್ಟು ಹೆಚ್ಚಾದರೂ ತಾಪಮಾನದಲ್ಲಿ ಹಲವು ರೀತಿಯ ವ್ಯತ್ಯಾಸಗಳಾಗಲಿವೆ' ಎಂದು ವಿವರಿಸಿದ್ದಾರೆ.
'ಜನಸಾಂದ್ರತೆ ಹೆಚ್ಚಾಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ನಗರಗಳಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯ ಕೊರತೆ ಇದೆ. ಜತೆಗೆ, ಈ ರಾಷ್ಟ್ರಗಳ ಶೇಕಡ 60ರಷ್ಟು ಮಂದಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ, ಮನೆಯ ಒಳಗೆ ಇವರು ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದರಿಂದ, ಇವರೆಲ್ಲರೂ ಬಿಸಿಲಿನ ತಾಪದ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.
'ಬಿಸಿಲಿನ ತಾಪಮಾನ ಕಡಿಮೆ ಮಾಡಲು ಮತ್ತು ಬಿಸಿಗಾಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟವಾದ ನೀತಿಯನ್ನು ರೂಪಿಸುವುದು ಅಗತ್ಯವಿದೆ' ಎಂದು ಚೆನ್ನೈನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.