ಕಾಸರಗೋಡು: ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೂಲಕ ಕೋವಿಡ್ ವ್ಯಾಕ್ಸಿನ್ ವಿತರಣೆಯನ್ನು ಮಾ. 9ರಿಂದ ಆರಂಭಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ. ಜಿಲ್ಲೆಯ 43ಸರ್ಕಾರಿ ಆಸ್ಪತ್ರೆಗಳಲ್ಲದೆ, ಚೆರ್ವತ್ತೂರಿನ ಕೆಎಎಚ್ ಆಸ್ಪತ್ರೆ, ಕಾಸರಗೋಡಿನ ಇ.ಕೆ ನಾಯನಾರ್ ಸಮಾರಕ ಸಹಕಾರಿ ಆಸ್ಪತ್ರೆ, ಕಾಸರಗೋಡು ಕಿಮ್ಸ್ ಆಸ್ಪತ್ರೆ, ಕಾಞಂಗಾಡಿನ ಸನ್‍ರೈಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಲಭ್ಯವಾಗಲಿದೆ.
ಒಟ್ಟು 47ಆಸ್ಪತ್ರೆಗಳಲ್ಲಿ 60ವರ್ಷ ಮೇಲ್ಪಟ್ಟವರಿಗೆ, 45ರಿಂದ 59ವರ್ಷ ಪ್ರಾಯದ ಗಂಭೀರ ಆರೋಗ್ಯ ಸಮಸ್ಯೆಯುಳ್ಳವರಿಗೆ ಕೋವಿಡ್ ವ್ಯಾಕ್ಸಿನೇಶನ್ ನೀಡಲಾಗುವುದು. ಆಶಾಕಾರ್ಯಕರ್ತೆಯರ ಮೂಲಕ ಮುಂಗಡವಾಗಿ ನೋಂದಾಯಿಸಿದ ಶೇ. 50ಮಂದಿ ಹಾಗೂ ಕೋವಿನ್ ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿದ ಶೇ. 50ಮಂದಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಶನ್‍ಗೆ ಪರಿಗಣಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಶನ್ ಪಡೆಯಲು ಆಯಾ ಕೇಂದ್ರಗಳನ್ನು ಸಂಪರ್ಕಿಸುವುದು, ಆರೋಗ್ಯ ಸಏತು ಅಥವಾ ಕೋವಿನ್ ಆ್ಯಪ್ ಮೂಲಕ ಆನ್ಲೈನ್‍ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್‍ಗಾಗಿ 250ರೂ. ಪಾವತಿಸಬೇಕಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಕೋವಿಡ್-19 ವಾರಿಯರ್ಸ್, 60ರ ಹರೆಯದ ಮೇಲ್ಪಟ್ಟ ಹಿರಿಯ ನಾಗರಿಕರು, 45ರಿಂದ 59ರ ಹರೆಯದೊಳಗಿನ ಗಂಭೀರ ಸ್ವರೂಪದ ಕಾಯಿಲೆ ಹೊಂದಿದವರ ಸಹಿತ 37037ಮಂದಿಗೆ ವ್ಯಾಕ್ಸಿನೇಶನ್ ನೀಡಲಾಗಿದೆ ಎಂದೂ ಡಠಾ. ರಾಮದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.