ಇಟಾನಗರ: ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವ ರಾಜ್ಯದ ಮೊದಲ ಔಪಚಾರಿಕ ಶಾಲೆಯನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಶನಿವಾರ ಉದ್ಘಾಟಿಸಿದರು.
'ನಯುಬು ನೈವಗಂ ಯೆರ್ಕೊ' ಹೆಸರಿನ ಶಾಲೆಯನ್ನು ಸೆಪ್ಪಾ ಸಮೀಪದ ರಂಗ್ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಈ ಶಾಲೆಯಲ್ಲಿ ಸ್ಥಳೀಯ ಸಂಪ್ರದಾಯ, ಭಾಷೆಗಳು, ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.
'ನಾನು ಬೌದ್ಧಧರ್ಮವನ್ನು ಅನುಸರಿಸುತ್ತೇನೆ. ಈ ಶಾಲೆಯಲ್ಲಿ ಬೌದ್ಧ ಧರ್ಮದ ಜೊತೆಗೆ ಸ್ಥಳೀಯ ಸಂಸ್ಕೃತಿ, ಪರಂಪರೆ, ಭಾಷೆ, ಜೀವನ ವಿಧಾನವನ್ನು ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಇದರಲ್ಲಿಯೇ ಪದವಿಯನ್ನೂ ಪಡೆಯುತ್ತಾರೆ. ನಮ್ಮ ಸ್ಥಳೀಯ ಸಂಸ್ಕೃತಿ, ಭಾಷೆಯನ್ನು ಕಲಿಸುವ ಶಾಲೆಗಳನ್ನು ನಾವು ಸ್ಥಾಪಿಸಬೇಕಿದೆ. ಇದಕ್ಕಾಗಿ ನಾವು ಹೆಮ್ಮೆಪಡಬೇಕು. ಇದರ ಜತೆಗೆ ಆಧುನಿಕ ಶಿಕ್ಷಣವನ್ನೂ ಕಲಿಯಬೇಕು' ಎಂದು ಪೆಮಾ ಖಂಡು ಹೇಳಿದರು.
'ಸರ್ಕಾರ ಈ ಶಾಲೆಯ ಅಭಿವೃದ್ಧಿಗಾಗಿ ₹ 3 ಕೋಟಿ ಅನುದಾನವನ್ನು ಮೀಸಲಿಟ್ಟಿದೆ' ಎಂದೂ ಅವರು ತಿಳಿಸಿದರು.