ಢಾಕಾ: ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಮೋದಿ ಹಾಗೂ ಶೇಖ್ ಹಸೀನಾ ಅವರು ಪಶ್ಚಿಮ ಬಂಗಾಳದ ನ್ಯೂ ಜಲ್ ಪೈಗುರಿ ಹಾಗೂ ಬಾಂಗ್ಲಾದೇಶದ ರಾಜಧಾನಿ ಢಾಕಾ ಮಧ್ಯೆ ಸಂಪರ್ಕ ಕಲ್ಪಿಸುವ ನೂತನ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದರು. ಭಾರತ ಹಾಗೂ ಬಾಂಗ್ಲಾ ನಡುವಿನ 3ನೇ ಪ್ಯಾಸೆಂಜರ್ ರೈಲು ಇದಾಗಿದೆ.
ಭಾರತ ಹಾಗೂ ಬಾಂಗ್ಲಾದೇಶದ ಮಧ್ಯೆ ವಿಪತ್ತು ನಿರ್ವಹಣೆ, ಯುವಜನ ಹಾಗೂ ಕ್ರೀಡೆ, ವ್ಯಾಪಾರ ವಹಿವಾಟು, ಸಂಪರ್ಕ ಮತ್ತು ಸಹಕಾರಕ್ಕೆ ಸಂಬಂಧಿಸಿದಂತೆ ಐದು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಬಾಂಗ್ಲಾದೇಶ ವಿಮೋಚನೆಗೊಂಡ 50ನೇ ವರ್ಷಾಚರಣೆಯ ನಿಮಿತ್ತ ಅಂಚೆ ಚೀಟಿ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
ಸಭೆಯ ಬಳಿಕ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪ್ರಧಾನಿ ಮೋದಿ ಹಾಗೂ ಶೇಖ್ ಹಸೀನಾ ಸುಮಾರು ಒಂದು ಗಂಟೆಗಳ ಕಾಲ ಆರೋಗ್ಯ, ವ್ಯಾಪಾರ ವಹಿವಾಟುಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಬಲಿಷ್ಠವಾಗಲಿವೆ ಎಂದು ಹೇಳಿದ್ದಾರೆ.
ರೋಹಿಂಗ್ಯನ್ನರನ್ನು ಮ್ಯಾನ್ಮಾರ್ ಗೆ ವಾಪಸ್ ಕಳಿಸುವ ವಿಷಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಮನವಿ ಮಾಡಿದ್ದಾರೆ.
ದ್ವಿಪಕ್ಷೀಯ ಮಾತುಕತೆ ವೇಳೆ ಶೇಖ್ ಹಸೀನಾ ಈ ವಿಷಯ ಪ್ರಸ್ತಾಪಿಸಿದ್ದು, ಒತ್ತಾಯಪೂರ್ವಕವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವ 1.1 ಮಿಲಿಯನ್ ಮಂದಿ ರೋಹಿಂಗ್ಯನ್ನರ ಬಗ್ಗೆ ವಿಷಯ ಪ್ರಸ್ತಾಪವಾಗಿದೆ.
ಮ್ಯಾನ್ಮಾರ್ ನಿಂದ ನಿರಾಶ್ರಿತರಾಗಿರುವವರ ಭದ್ರತೆಯ ಪ್ರಾಮುಖ್ಯತೆಯನ್ನು ಇಬ್ಬರೂ ಪ್ರಧಾನಿಗಳು ಮನಗಂಡಿದ್ದು, ಪ್ರಾದೇಶಿಕವಾಗಿ ಶಾಂತಿ ಸ್ಥಾಪನೆಗೆ ನಿರಾಶ್ರಿತರು ಸುಭದ್ರವಾಗಿ ಅವರ ನೆಲೆಗಳಿಗೆ ಹಿಂತಿರುಗಬೇಕೆಂಬುದನ್ನು ಪುನರುಚ್ಚರಿಸಿದ್ದಾರೆ.
ಈ ವೇಳೆ ಭಾರತಕ್ಕೆ ಮನವಿ ಮಾಡಿರುವ ಶೇಖ್ ಹಸೀನಾ, ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿದ್ದುಕೊಂಡು ರೋಹಿಂಗ್ಯನ್ನರನ್ನು ಮ್ಯಾನ್ಮಾರ್ ಗೆ ವಾಪಸ್ ಕಳಿಸುವ ವಿಷಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ ಮಾಡಿದ್ದಾರೆ.