ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಘಟನೆ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತು ಇದೀಗ ಹಲವಾರು ವಾದ-ವಿವಾದಗಳ ಬಳಿಕ ಕೊನೆಗೂ ಚುನಾವಣೆಗೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ವೇದಿಕೆ ಸಿದ್ದಗೊಳ್ಳುತ್ತಿದ್ದು, ಜಿಲ್ಲಾ ಘಟಕಗಳ ಅಧ್ಯಕ್ಷ ಪದವಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.
ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೇಶದ ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕøತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುವ ಅಪಾಯವಿರುತ್ತದೆ. ಇದಕ್ಕೆ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮೃದ್ಧವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವ್ಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ ಕನ್ನಡಕ್ಕೆ ಎದುರಾದ ಸಮಸ್ಯೆಗಳು ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೆÇೀಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.
ಮುಚ್ಚುತ್ತಿರುವ ಕನ್ನಡ ಶಾಲೆಗಳು:
ಇವತ್ತು ರಾಜ್ಯದಲ್ಲಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಭಾಷೆ ಮಹತ್ವ ಪಡೆದಿರುವುದರಿಂದ ಅದನ್ನು ಭಾಷೆ ಮಾತ್ರವಾಗಿ ಕಲಿಯದೆ ಅದನ್ನೇ ಕಲಿಕೆಯ ಮಾಧ್ಯಮವಾಗಿ ಮಾಡಿಕೊಳ್ಳಲಾಗಿದೆ. ಹೀಗೆ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಈ ದಿನಗಳಲ್ಲಿ ಈ ನೆಲದ ಭಾಷೆಯಾದ ಕನ್ನಡವನ್ನು ಶಾಲೆಗಳಲ್ಲಿ ಮಕ್ಕಳಿಗೆ ಭಾಷೆಯಾಗಿ ಕಲಿಸುವ ದುರಂತ ಎದುರಾಗಿದೆ. ವಿಪರ್ಯಾಸ ನೋಡಿ ಮಾತನಾಡುವ ನಾಡಿನ ಭಾಷೆಯಾಗಿ ಕನ್ನಡ ನಮಗೆಲ್ಲರಿಗೂ ಚಿರಪರಿಚಿತ ಹೀಗಿದ್ದೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಎರಡನೆ ಇಲ್ಲವೇ ಮೂರನೇ ಭಾಷೆಯಾಗಿ ನಮ್ಮ ಮಕ್ಕಳು ಕಲಿಯುವ ದಿನಗಳು ಬಂದಿವೆ. ಯಾವ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬಳಸಿಕೊಳ್ಳಬೇಕೋ ಅದನ್ನು ಕೇವಲ ಭಾಷೆಯಾಗಿ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿರುವರು. ಭಾಷೆಯಾಗಿ ಕಲಿಯುವ ಅಗತ್ಯವಿರುವ ಇಂಗ್ಲಿಷ್ ಇಂದು ಶಿಕ್ಷಣದ ಮಾಧ್ಯಮವಾಗಿ ಬಹುಮುಖ್ಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ತಮ್ಮ ಮಾತೃಭಾಷೆಯ ಮೂಲಕ ವಿವಿಧ ವಿಷಯಗಳನ್ನು ಸುಲಭವಾಗಿ ಕಲಿಯಬಲ್ಲರು ಎನ್ನುವ ವೈಜ್ಞಾನಿಕ ಸತ್ಯವನ್ನು ಕಡೆಗಣಿಸಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಣೆಹಾಕಲಾಗುತ್ತಿದೆ. ಪರಿಣಾಮವಾಗಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ಯಮದ ರೂಪ ಪಡೆದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ತಮ್ಮ ಮಕ್ಕಳನ್ನು ಜಾಗತೀಕರಣಕ್ಕೆ ಮುಖಾಮುಖಿಯಾಗಿಸುವ ಧಾವಂತದಲ್ಲಿ ಉಳ್ಳವರು ಮತ್ತು ಉಳ್ಳದವರು ಕೂಡಿ0iÉ?? ಇಂಗ್ಲಿಷ್ ಶಾಲೆಗಳ ಪ್ರವೇಶಕ್ಕೆ ಮುಗಿಬಿಳುತ್ತಿರುವರು. ಪಾಲಕರ ಇಂಗಿತವನ್ನು ತಮ್ಮ ಸ್ವಾರ್ಥ ಮತ್ತು ಧನದಾಹಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳ ಆಡಳಿತ ಮಂಡಳಿಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇನ್ನೊಂದೆಡೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿಹೋಗುವ ದುಸ್ಥಿತಿಗೆ ಬಂದು ನಿಂತಿವೆ. ಯಾವಾಗ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ತನ್ನ ಪಾರುಪತ್ಯವನ್ನು ಮೆರೆಯತೊಡಗಿತೋ ಆಗ ನಿಜವಾಗಿ ಸಂಕಷ್ಟದಲ್ಲಿ ಸಿಲುಕಿದ್ದು ಕನ್ನಡ ಭಾಷೆ.
ಸಾಹಿತ್ಯವಲಯದ ಗುಂಪುಗಾರಿಕೆ:
ಕನ್ನಡದ ವೈಚಾರಿಕ ವಲಯ ವಿಶೇಷವಾಗಿ ಸಾಹಿತ್ಯವಲಯ ಇಂದು ವಿವಿಧ ಗುಂಪುಗಳಾಗಿ ಒಡೆದು ಹೋಳಾಗಿದೆ. ಭಿನ್ನಾಭಿಪ್ರಾಯ ಅದು ಪ್ರಜಾಪ್ರಭುತ್ವದ ಜೀವಂತ ಲಕ್ಷಣ ನಿಜ ಆದರೆ ನಾವು ತಿಳಿದುಕೊಂಡಂತೆ ಡೆಮಾಕ್ರೆಟಿಕ್ ವಾತಾವರಣ ಇವತ್ತಿನ ಕನ್ನಡ ಸಾಹಿತ್ಯ ವಲಯದಲ್ಲಿಲ್ಲ. ಅಸಹನೆ, ವರ್ಗತಾರತಮ್ಯ, ಅಸೂಯೆ,ಗುಂಪುಗಾರಿಕೆ, ಅಧಿಕಾರದ ಓಲೈಸುವಿಕೆ, ರಾಜಕಾರಣ, ಪ್ರಶಸ್ತಿ ಪುರಸ್ಕಾರದ ವಾಂಛೆ ಇವತ್ತಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ. ಸಾಹಿತ್ಯವಲಯ ಎಡಪಂಥ ಮತ್ತು ಬಲಪಂಥ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿಕೊಂಡಿದೆ. ಒಬ್ಬ ಬರಹಗಾರ ಈ ಯಾವುದಾದರೂ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಆತ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಪ್ರತಿಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಅಂಥದ್ದೊಂದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯಬೇಕಾದ ಅನಿವಾರ್ಯತೆ ಲೇಖಕನದು. ಒಂದು ಗುಂಪಿನ ಬರಹಗಾರರ ವಿರುದ್ಧ ಇನ್ನೊಂದು ಗುಂಪಿನವರು ಇಲ್ಲಿ ಕತ್ತಿ ಮಸೆಯುತ್ತಾರೆ. ಅದಕ್ಕೆಂದೇ ಭೈರಪ್ಪನವರ ಆವರಣದ ವಿರುದ್ಧ ಅನಾವರಣ ಕೃತಿ ಪ್ರಕಟವಾಗುತ್ತದೆ. ಸಂಸ್ಕಾರದ ಎದುರು ವಂಶವೃಕ್ಷವನ್ನು ಹತಾರವಾಗಿಸುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗುವ ಸೃಜನಶೀಲರು ಪ್ರಶಸ್ತಿ ಪುರಸ್ಕಾರಗಳಿಗಾಗಿ ತಮ್ಮದೇ ಗುಂಪಿನ ಲೇಖಕರಿಗೆ ಮಣೆಹಾಕುತ್ತಾರೆ. ಗುಂಪುಗಾರಿಕೆ, ದ್ವೇಷಾಸೂಯೆಗಳ ಪರಿಣಾಮ ಇಲ್ಲಿ ಭಾಷೆಯ ಕುರಿತಾದ ಕಾಳಜಿ ಮೂಲೆಗುಂಪಾಗುತ್ತದೆ.
ಭಾಷಾ ಚಳವಳಿ:
ಕನ್ನಡ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ. ಗೋಕಾಕ ಚಳವಳಿ ಕಾಣಿಸಿಕೊಂಡ 1980 ರ ದಶಕದ ಅಂದಿನ ಕನ್ನಡ ಭಾಷೆಯ ಸ್ಥಿತಿಗೂ ಮತ್ತು ಇವತ್ತು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. 1980 ರ ದಶಕದಲ್ಲಿ ಆಗಿನ್ನೂ ಜಾಗತೀಕರಣ ಈಗಿನಷ್ಟು ತನ್ನ ಪ್ರಾಬಲ್ಯವನ್ನು ಮೆರೆದಿರಲಿಲ್ಲ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅದೇ ಆಗ ನೆಲೆಯೂರಲು ಪ್ರಯತ್ನಿಸುತ್ತಿತ್ತು. ಅಂಥ ದಿನಗಳಲ್ಲಿ ಕನ್ನಡದ ಸಾಹಿತ್ಯವಲಯ ಹಾಗೂ ಸಿನಿಮಾ ಕಲಾವಿದರು ಒಟ್ಟಾಗಿ ಪ್ರತಿಭಟನೆಗಿಳಿದು ಬಹುದೊಡ್ಡ ಚಳವಳಿಗೆ ಕಾರಣರಾದರು. ಅಂದಿನ ಸರ್ಕಾರ ಸಹ ಹೋರಾಟಗಾರರ ಪ್ರತಿಭಟನೆಗೆ ಸ್ಪಂದಿಸಿ ಅನೇಕ ಭರವಸೆಗಳನ್ನು ನೀಡಿತು. ಗೋಕಾಕ ಚಳವಳಿಯ ನಂತರದ ಈ ಮೂರು ದಶಕಗಳಲ್ಲಿ ಕನ್ನಡ ಭಾಷೆ ಬಲಾಢ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಿಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷಿಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ. ಗೋವಾ ರಾಜ್ಯದಲ್ಲಿರುವ ಅನಿವಾಸಿ ಕನ್ನಡಿಗರ ಬದುಕು ತನ್ನ ನೆಲೆಯನ್ನು ಕಳೆದುಕೊಂಡಿದೆ. ಸೃಜನಶೀಲ ಮಾಧ್ಯಮವಾದ ಸಿನಿಮಾ ಇಂದು ಭಾಷೆಯನ್ನು ಅತಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಇಂಥ ಸಂಕ್ರಮಣ ಕಾಲದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಗಳನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಹೋರಾಟಗಳಿಗೆ ವಿಮುಖವಾಗುತ್ತಿದೆ.
ಜಾತ್ರೆಯಾಗುತ್ತಿರುವ ಸಮ್ಮೇಳನಗಳು!:
ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆಯ ಶ್ರೇಷ್ಠತೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಒಯ್ದು ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಮತ್ತು ಅದಕ್ಕೆ ಎದುರಾಗಿರುವ ಆತಂಕದ ಕುರಿತು ಸಮ್ಮೇಳನದ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ಕನ್ನಡವನ್ನು ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಉಳಿಸಿಕೊಳ್ಳುವ ಕುರಿತು ಅಭಿಪ್ರಾಯಗಳು ಮತ್ತು ಪರಿಹಾರಗಳು ಮೂಡಬೇಕು. ಕನ್ನಡ ಭಾಷೆಯನ್ನು ಜನಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಪ್ರಯತ್ನಗಳಾಗಬೇಕು. ದುರಂತದ ಸಂಗತಿ ಎಂದರೆ ಅಧ್ಯಕ್ಷ ಸ್ಥಾನದ ಲಾಲಸೆ, ವೇದಿಕೆಯಲ್ಲಿ ಅವಕಾಶ ಪಡೆಯುವ ಹುನ್ನಾರ, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಭಿ, ಸ್ವಜಾತಿ ಸ್ವಧರ್ಮದ ಮೋಹಕ್ಕೆ ಕಟ್ಟುಬಿದ್ದು ನಮ್ಮ ಸಾಹಿತ್ಯವಲಯ ಸಮ್ಮೇಳನಗಳಿಗೆ ಅಕ್ಷರಶ: ಜಾತ್ರೆಯ ಸ್ವರೂಪವನ್ನು ತಂದಿರುವರು. ಜೊತೆಗೆ ಸಮ್ಮೇಳನದ ವೇದಿಕೆಯನ್ನು ಸಾಹಿತಿಗಳು ರಾಜಕಾರಣಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಭಾಷೆಯ ದೃಷ್ಟಿಯಿಂದ ಇನ್ನೊಂದು ಆತಂಕದ ಸಂಗತಿ. ಹೀಗೆ ರಾಜಕಾರಣಿಗಳನ್ನು ಸಮ್ಮೇಳನಗಳ ವೇದಿಕೆಗೆ ಕರೆತರುತ್ತಿರುವುದರಿಂದ ಸಮ್ಮೇಳನಗಳು ರಾಜಕಾರಣಿಗಳ ಒಡ್ಡೋಲಗದಂತೆ ಭಾಸವಾಗುತ್ತಿದೆ. ಅವರವರ ವೈಯಕ್ತಿಕ ಹಿತಾಸಕ್ತಿಗಳ ನಡುವೆ ನಲುಗಿ ಹೋಗುತ್ತಿರುವುದು ಮಾತ್ರ ಕನ್ನಡ ಭಾಷೆ ಎನ್ನುವುದು ಅಕ್ಷರಶ: ಸತ್ಯ.
ಕನ್ನಡ ಸಾಹಿತ್ಯ ಪರಿಷತ್ತು:
ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ದಶಕಗಳಿಂದ ತನ್ನ ಮೂಲ ಉದ್ದೇಶದಿಂದ ಕಳಚಿಕೊಂಡು ಸ್ವಾರ್ಥಿಗಳ ಮತ್ತು ಅಧಿಕಾರ ಲಾಲಸೆಯ ಕೇಂದ್ರವಾಗಿ ರೂಪಾಂತರಗೊಂಡಿದೆ. ಈಗ ಅಲ್ಲಿಯೂ ರಾಜಕೀಯ ತಲೆ ಹಾಕಿದೆ. ಪರಿಣಾಮವಾಗಿ ಕಸಾಪದ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಸ್ಥಾನಗಳಿಗಾಗಿ ನಡೆಯುವ ಚುನಾವಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಕಸಾಪದ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರವೇಶದಿಂದಾಗಿ ಅಲ್ಲಿ ಜಾತಿ ಮತ್ತು ಪ್ರಾದೇಶಿಕ ಗುಂಪುಗಾರಿಕೆ ಪರಿಷತ್ತಿನ ನಡೆಯನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಪುಸ್ತಕಗಳ ಪ್ರಕಟಣೆ, ಪ್ರಶಸ್ತಿ ಪುರಸ್ಕಾರ, ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಗೋಷ್ಠಿಗಳ ಅಧ್ಯಕ್ಷತೆ, ಗೋಷ್ಠಿಗಳಲ್ಲಿ ಕವನಗಳ ವಾಚನ ಮತ್ತು ಪ್ರಬಂಧಗಳ ಮಂಡನೆ ಹೀಗೆ ಪ್ರತಿಹಂತದಲ್ಲೂ ಜಾತಿ ಮತ್ತು ಪ್ರಾದೇಶಿಕತೆಯ ಕೋಟಾ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮಾತುಗಳನ್ನು ವೇದಿಕೆಯಲ್ಲೇ ಮೊಟಕುಗೊಳಿಸುವಂತೆ ಒತ್ತಾಯಿಸುವಷ್ಟು ಕಸಾಪದ ಕೈಗಳು ಉದ್ದವಾಗಿವೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಉಳಿವಿಗಾಗಿ ಹೋರಾಟಗಳನ್ನು ಸಂಘಟಿಸುತ್ತಿಲ್ಲ ಮತ್ತು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ಹೋರಾಟ ಮತ್ತು ಚಳವಳಿಗಳನ್ನು ಸಂಘಟಿಸಬೇಕಾದ ಜವಾಬ್ದಾರಿಯಿದೆ. ಆದರೆ ಪರಿಷತ್ತು ಈ ವಿಷಯವಾಗಿ ನುಣುಚಿಕೊಂಡಿದ್ದೆ ಹೆಚ್ಚು.
ಓದುಗರ ಕೊರತೆ:
ಕನ್ನಡ ಭಾಷೆಯಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವ ಈ ಹೊತ್ತು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಪುಸ್ತಕಗಳನ್ನು ಅವುಗಳ ಮುಖಬೆಲೆಗೆ ಖರೀದಿಸಿ ಓದುವ ಓದುಗರ ಸಂಖ್ಯೆ ಕನ್ನಡದಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಬೆರಳೆಣಿಕೆಯ ಲೇಖಕರ ಪುಸ್ತಕಗಳು ಹತ್ತಾರು ಬಾರಿ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವಾಗ ಅದನ್ನೇ ಇಡೀ ಪುಸ್ತಕೋದ್ಯಮಕ್ಕೆ ಅನ್ವಯಿಸುವುದು ತಪ್ಪು ನಡೆಯಾಗುತ್ತದೆ. ಲೇಖಕರಂತೆ ಓದುಗರ ವಲಯದಲ್ಲಿನ ಗುಂಪುಗಾರಿಕೆಯ ಪರಿಣಾಮ ಪ್ರಕಟವಾದ ಪುಸ್ತಕವೊಂದು ಅದು ಹೆಚ್ಚಿನ ಸಂಖ್ಯೆಯ ಓದುಗರ ಓದಿಗೆ ದಕ್ಕುವ ಸಾಧ್ಯತೆ ತೀರ ಕಡಿಮೆ. ಅನಂತಮೂರ್ತಿ ಅವರನ್ನು ಓದುವ ಓದುಗ ಭೈರಪ್ಪನವರನ್ನು ಓದಲಾರದಂಥ ವಾತಾವರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಲೆದೂರಿದೆ. ಪರಿಣಾಮವಾಗಿ ಲೇಖಕ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಅವನ ಕೃತಿಗಳ ಓದಿಗೆ ಒಂದಿಷ್ಟು ಓದುಗರು ದಕ್ಕಬಹುದು. ಪರಿಸ್ಥಿತಿ ಹೀಗಿರುವಾಗ ಯಾವ ಗುಂಪಿನೊಂದಿಗೂ ಗುರುತಿಸಿಕೊಳ್ಳದ ಲೇಖಕರ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಅಲಂಕಾರಿಕ ವಸ್ತುಗಳಾಗಿ ಉಳಿದು ಹೋಗುವ ಅಪಾಯ ಎದುರಾಗುತ್ತದೆ. ಸಾಹಿತಿ ತಿರುಮಲೇಶ್ ಅವರು ಹೇಳುವಂತೆ ಓದುಗರು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಲೇಖಕರ ಪುಸ್ತಕಗಳನ್ನು ಮಾತ್ರ ತಮ್ಮ ಓದಿಗಾಗಿ ಆ0iÉ??? ಮಾಡುತ್ತಿರುವರು. ಅವರೇ ಹೇಳುವಂತೆ ಇದು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ತುಂಬ ಅಪಾಯಕಾರಿಯಾದ ನಡೆ. ಏಕೆಂದರೆ ಮುಖ್ಯವಾಹಿನಿ ಎನ್ನುವುದು ಎಲ್ಲರನ್ನೂ ಮತ್ತು ಎಲ್ಲರ ಕೃತಿಗಳನ್ನು ಒಳಗೊಳ್ಳುವ ಸಮಗ್ರವಾಹಿನಿಯಲ್ಲ. ಗಟ್ಟಿಯಾದ ವಿಷಯವಸ್ತುವನ್ನು ಒಳಗೊಂಡಿರುವ ಅನೇಕ ಪುಸ್ತಕಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೇ ಹೋಗಬಹುದು. ಆಗೆಲ್ಲ ಅಂಥ ಪುಸ್ತಕಗಳು ಓದುಗರ ಓದಿನ ವ್ಯಾಪ್ತಿಯಿಂದ ದೂರವೇ ಉಳಿಯುತ್ತವೆ.
ಕನ್ನಡ ಸಿನಿಮಾಗಳು:
ಸೃಜನಶೀಲ ಮಾಧ್ಯಮವೆಂದೆ ಗುರುತಿಸಿಕೊಂಡಿರುವ ಕನ್ನಡ ಸಿನಿಮಾ ಮಾಧ್ಯಮ ಇವತ್ತು ಭಾಷೆಯನ್ನು ಅತ್ಯಂತ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಸಿನಿಮಾವನ್ನು ಅದೊಂದು ಸೃಜನಶೀಲ ಮಾಧ್ಯಮವೆಂದು ಭಾವಿಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಿನಿಮಾ ಮಾಧ್ಯಮದಲ್ಲಿದ್ದರು. ಆಗೆಲ್ಲ ನಿರ್ಮಾಣವಾಗುತ್ತಿದ್ದ ಸಿನಿಮಾಗಳು ನಾಡು ನುಡಿಯ ಆಶಯಕ್ಕೆ ಪೂರಕವಾಗಿರುತ್ತಿದ್ದವು. ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ಭಾವಿಸಿ ಲೇಖಕರು ಸಿನಿಮಾಗಳಿಗೆ ಸಂಭಾಷಣೆ ಬರೆದ ಮತ್ತು ಹಾಡುಗಳನ್ನು ರಚಿಸಿದ ಅನೇಕ ಉದಾಹರಣೆಗಳಿವೆ. ಕಾಲಾನಂತರದಲ್ಲಿ ಸಿನಿಮಾ ಅದೊಂದು ಹಣ ಮಾಡುವ ಉದ್ಯಮ ಎನ್ನುವ ಭಾವನೆ ಬಲವಾದಂತೆ ಸಿನಿಮಾದ ಕಥೆ ಹೆಣೆಯುವ ಮತ್ತು ಸಂಭಾಷಣೆಗಳನ್ನು ಹೇಳಿಸುವ ರೀತಿನೀತಿಗಳು ಬದಲಾದವು. ಸಿನಿಮಾ ಮಾಧ್ಯಮ ತನ್ನದೇ ಭಾಷೆಯನ್ನು ರೂಪಿಸಿಕೊಂಡು ಮನರಂಜನೆಯನ್ನೇ ತನ್ನ ಮೂಲ ಉದ್ದೇಶವಾಗಿಸಿಕೊಂಡಾಗ ಅಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಒಳಗಾಗಿದ್ದು ಈ ನೆಲದ ಭಾಷೆ. ಜೊತೆಗೆ ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಕನ್ನಡೇತರ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅನ್ಯಭಾಷೆಯ ಪದಗಳಿಗೆ ಸಿನಿಮಾಗಳಲ್ಲಿ ಮುಕ್ತ ಪ್ರವೇಶ ದೊರೆಯಲಾರಂಭಿಸಿತು. ವ್ಯಾಕರಣವೇ ಇಲ್ಲದ ವಾಕ್ಯಗಳು, ಇಂಗ್ಲಿಷ್ ಮಿಶ್ರಿತ ಕನ್ನಡ, ಪಾತ್ರಗಳಿಂದ ತೆಲುಗು, ತಮಿಳು ಸಂಭಾಷಣೆ ಹೀಗೆ ಹೊಸ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡಲು ಮಾಡಿದ ಪ್ರಯತ್ನಗಳು ಕನ್ನಡ ಭಾಷೆಗೆ ಬಹುದೊಡ್ಡ ಆತಂಕವನ್ನು ತಂದೊಡ್ಡಿವೆ.
ಪರಭಾಷೆಗಳ ಪ್ರಾಬಲ್ಯ:
ಇವತ್ತು ಕನ್ನಡ ಭಾಷೆ ತನ್ನದೇ ನೆಲದಲ್ಲಿ ತನ್ನ ಅಸ್ತಿತ್ವಕ್ಕಾಗಿ ಅನೇಕ ಭಾಷೆಗಳೊಡನೆ ಸೇಣಿಸಬೇಕಿದೆ. ರಾಜ್ಯದ ರಾಜಧಾನಿ ಅದು ಅನೇಕ ಭಾಷೆಗಳ ಮತ್ತು ಸಂಸ್ಕೃತಿಗಳ ಸಂಗಮ. ಇಲ್ಲಿ ಕನ್ನಡಕ್ಕಿಂತ ತಮಿಳು ಮತ್ತು ಮಲೆಯಾಳಂ ಭಾಷಿಕರ ಸಂಖ್ಯೆಯೇ ಹೆಚ್ಚು. ಸಾಫ್ಟ್ವೇರ್ ಉದ್ಯಮ ಬೆಂಗಳೂರಿಗೆ ಕಾಲಿಟ್ಟು ಅದು ಸಿಲಿಕಾನ್ ವ್ಯಾಲಿ ಎನ್ನುವ ಮನ್ನಣೆಗೆ ಪಾತ್ರವಾದ ಮೇಲೆ ಇಲ್ಲಿ ಇಂಗ್ಲಿಷ್ ಸಹ ಬಹುಮುಖ್ಯ ಸಂವಹನದ ಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಬೆಂಗಳೂರಿನಲ್ಲಿ ಕನ್ನಡವನ್ನು ಬರಿಗಣ್ಣಿನಿಂದ ಹುಡುಕಿದರೆ ಅದು ನಮಗೆ ಸಿಗದು. ಇನ್ನು ಗಡಿನಾಡಿನ ಪ್ರದೇಶಗಳಲ್ಲಿ ಮಲೆಯಾಳಂ, ತೆಲುಗು, ತಮಿಳು ಮತ್ತು ಮರಾಠಿ ಭಾಷೆಗಳು ಕನ್ನಡಕ್ಕೆ ತೀವ್ರ ಪೈಫೆÇೀಟಿ ಒಡ್ಡುತ್ತಿವೆ. ಬೆಳಗಾವಿಯ ಮನೆಗಳ ಮೇಲೆ ಇವತ್ತಿಗೂ ಮರಾಠಿ ಧ್ವಜ ಹಾರಾಡುವುದನ್ನು ಕಾಣಬಹುದು. ಈ ಜಿಲ್ಲೆಯ ಅದೆಷ್ಟೊ ಹಳ್ಳಿಗಳು ಭೌತಿಕವಾಗಿ ಕರ್ನಾಟಕದಲ್ಲಿದ್ದರೂ ಮಾನಸಿಕವಾಗಿ ಮಹಾರಾಷ್ಟ್ರದೊಂದಿಗೆ ಗುರುತಿಸಿಕೊಂಡಿವೆ. ಬಳ್ಳಾರಿ, ರಾಯಚೂರು ಮತ್ತು ಕೋಲಾರದ ಜನ ತೆಲುಗು ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹೀಗಾಗಿ ಕನ್ನಡ ಬಾಷೆ ಇವತ್ತು ತನ್ನ ಅಸ್ತಿತ್ವವನ್ನು ಹುಡುಕಿ ಅಲೆಯಬೇಕಾದ ಪ್ರಸಂಗ ಎದುರಾಗಿದೆ.
ರಾಜಕೀಯದ ಸ್ವಹಿತಾಸಕ್ತಿ:
ಸ್ವಜಾತಿ, ಸ್ವಧರ್ಮ ಮತ್ತು ಪ್ರಾದೇಶಿಕತೆಯ ಹಿತಾಸಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವ ನಮ್ಮ ಜನಪ್ರತಿನಿಧಿಗಳು ಭಾಷೆ ಮತ್ತು ನಾಡಿನ ವಿಷಯವಾಗಿ ಯಾವತ್ತೂ ನಿರಾಸಕ್ತರು. ಈ ವಿಷಯದಲ್ಲಿ ನಾವು ತೆಲುಗು, ತಮಿಳು ಮತ್ತು ಮರಾಠಿಗರಿಗೆ ಅನುಕರಣಿಯರಾಗಿರಬೇಕು. ಎಂದಿಗೂ ಪ್ರಾದೇಶಿಕ ನೆಲೆಯಲ್ಲಿ ಚಿಂತಿಸುವ ನಮ್ಮ ನೆರೆಯ ರಾಜ್ಯಗಳ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿಗೆ ತೊಂದರೆ ಎದುರಾದಾಗ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುತ್ತಾರೆ. ಆದರೆ ನಮ್ಮ ರಾಜಕಾರಣಿಗಳಲ್ಲಿನ ಅಂಥದ್ದೊಂದು ಮನೋಭಾವದ ಕೊರತೆಯ ಪರಿಣಾಮ ಇವತ್ತು ಕರ್ನಾಟಕ ರಾಜ್ಯ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅದು ಕಾವೇರಿ ನದಿಯ ನೀರಿನ ವಿಷಯವಾಗಿರಬಹುದು ಅಥವಾ ಮಹಾದಾಯಿ ನದಿಗೆ ಸಂಬಂಧಿಸಿದ್ದಾಗಿರಬಹುದು, ಆಲಮಟ್ಟಿ ಅಣೆಕಟ್ಟಿನ ಎತ್ತರ, ಪರಭಾಷಾ ಸಿನಿಮಾಗಳ ಬಿಡುಗಡೆಗೆ ನಿಷೇಧ, ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಾಪನೆ ಹೀಗೆ ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಸೋಲಾಗಿದೆ. ಈ ಎಲ್ಲ ಸೋಲುಗಳ ಹಿಂದೆ ನಮ್ಮನ್ನಾಳುವ ರಾಜಕಾರಣಿಗಳ ಸ್ವಹಿತಾಸಕ್ತಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.
ಕಾಸರಗೋಡಲ್ಲಿ:
ಗಡಿನಾಡು ಕಾಸರಗೋಡಲ್ಲಿ ಕನ್ನಡ ಅಸ್ತಿತ್ವಕ್ಕೆ ವರ್ಷದಿಂದ ವರ್ಷಕ್ಕೆ ಭಾರೀ ಹಿನ್ನಡೆಯಾಗುತ್ತಿರುವುದು ಕಹಿಸತ್ಯ. ಕನ್ನಡ ಬಳಕೆ ದೂರ-ದೂರದತ್ತ ಸಾಗುತ್ತಿರುವುದು ಆತಂಕಕಾರಿ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಆಳುವ ಕೇರಳ ಸರ್ಕಾರ ಆಗಾಗ ವಿವಿಧ ತಗಾದೆಗಳ ಮೂಲಕ ಸಾಂವಿಧಾನಿಕ ಹಕ್ಕಿಗೆ ಧಕ್ಕೆ ತರಲು ನಿರಂತರ ಯತ್ನಿಸುತ್ತಿದೆ.
ಈ ಮಧ್ಯೆ ಇದೀಗ ಕ.ಸಾ.ಪ ಚುನಾವಣೆ ಕಾವೇರುವ ಸೂಚನೆ ಇದೆ. ಒಂದೆಡೆ ವಿಧಾನ ಸಭೆಯ ಕಾವಿನ ಮಧ್ಯೆ ಕಸಾಪ ಚುನಾವಣೆಯ ಕಾವೂ ಏಳುವ ಸೂಚನೆ ಲಭ್ಯವಾಗಿದೆ.
ಕಳೆದ ಮೂರು ಅವಧಿಗಳಿಂದ ಎಸ್.ವಿ. ಭಟ್ ಕಸಾಪ ಗಡಿನಾಡ ಘಟಕಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚು ಕ್ರಿಯಾತ್ಮಕವೂ ಅಲ್ಲದ, ಹಾಗೆಂದು ಕಳಪೆಯೂ ಅಲ್ಲದೆ ಮಧ್ಯಮ ಮಟ್ಟದಲ್ಲಿ ಅವರ ಕರ್ತವ್ಯ ಸಮಧಾನಕರವಾಗಿಯೇ ಸಾಗಿಬಂದಿದೆ. ಆದರೆ ಗಟ್ಟಿ ಧ್ವನಿಯಾಗಿ, ಗಡಿನಾಡ ಸಮಗ್ರ ಕನ್ನಡಿಗರ ಒಕ್ಕೊರಲ ಶಕ್ತಿಯಾಗುವಲ್ಲಿ ಅವರು ಸೋತಿರುವುದು ಅಷ್ಟೇ ಸತ್ಯ!. ಈ ಬಾರಿಯೂ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ. ಜೊತೆಗೆ ಹೊಸ ಮುಖಗಳನ್ನು ಪರಿಚಯಿಸುವ ಮತ್ತೊಂದು ಯತ್ನವೂ ನಡೆಯುತ್ತಿರುವುದು ಗೌಪ್ಯವಲ್ಲ. ಸುಮಾರು 530ರಷ್ಟು ಸದಸ್ಯರಿರುವ ಕಸಾಪ ಗಡಿನಾಡ ಘಟಕದಲ್ಲಿ ಹೊಸ ತಲೆಮಾರಿನ ಯುವಕರ ಸಂಖ್ಯೆ ಬಹಳಷ್ಟು ಕಡಿಮೆ ಇರುವುದು ಉಲ್ಲೇಖಾರ್ಹ.
ಕೊನೆಯ ಮಾತು:
ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ನಾಡು ನುಡಿಗೆ ಪೂರಕವಾದ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿ ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ಅದರ ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು. ಜೊತೆಗೆ ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಳ್ಳುವತ್ತ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ನಾವಿಡಬೇಕಿದೆ.