HEALTH TIPS

ಸಾಧಕರ ಜೀವನಾಧಾರಿತ ಶೋಧಕ ಚಿತ್ರಗಳು ಮಾರ್ಧನಿಸಬೇಕು-ಪೋಲೀಸ್ ಆಯುಕ್ತ ಶಶಿಕುಮಾರ್: ಮಂಜೇಶ್ವರ ಗೋವಿಂದ ಪೈ ಅವರಿಗೆ 'ಮಹಾಕವಿ' ಚಿತ್ರ ಕಥೆ (ಸ್ಕ್ರಿಪ್ಟ್) ಪೂಜೆ ಮೂಲಕ ನುಡಿನಮನ ಮತ್ತು ಸ್ಮರಣೆ

 

       ಮಂಜೇಶ್ವರ: ಕನ್ನಡ ಚಿತ್ರೋದ್ಯಮದಲ್ಲಿ ಮಾದರಿಯಾಗಬೇಕಾದ ಕಥಾನಕಗಳ ಬದಲಿಗೆ ಪ್ರತಿಕೂಲಾತ್ಮಕ ಸಂದೇಶ ನೀಡುವ ಚಿತ್ರಗಳು ವೀಕ್ಷಕರಿಗೆ ಲಭಿಸುತ್ತಿರುವ ಈ ಹೊತ್ತಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಸಾಧಕರ ಜೀವನಾಧಾರಿತ ಶೋಧಕ ಚಿತ್ರಗಳೂ ರೂಪುಗೊಳ್ಳಬೇಕಾದ ತುರ್ತು ಈಗಿದೆ. ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಬದುಕು, ಬರಹ ಕನ್ನಡ ನಾಡಿನ ಎಲ್ಲರಿಗೂ ಮಾದರಿಯಾಗಿದೆ. ಹಲವು ಭಾಷೆಗಳಲ್ಲಿ ಅಗಾಧ ಜ್ಞಾನ ಹೊಂದಿದ್ದ ಗೋವಿಂದ ಪೈ ಸಂಶೋಧಕರಾಗಿಯೂ ವಿಖ್ಯಾತರು. ಇಂತಹ ಮಹಾಮಹಿಮನ ಜೀವನವನ್ನು ಆಧರಿಸಿ ಮೂಡಿಬರಲಿರುವ ಮಹಾಕವಿ ಸಿನಿಮಾ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಮಂಗಳೂರು ಪೋಲಿಸ್ ಆಯುಕ್ತ ಶಶಿಕುಮಾರ್ ಹೇಳಿದರು. 

       ಕನ್ನಡದ ಸಾಹಿತ್ಯ ಕ್ಷೇತ್ರ ವಿಶಾಲವಾಗಿದೆ. ಕನ್ನಡದ ಸಾಹಿತಿಕ ಕ್ಷೇತ್ರವನ್ನು ಹಲವು ಮಹಾಮಹಿಮರು ಬಹಳ ಶ್ರೀಮಂತಗೊಳಿಸಿದ್ದಾರೆ. ಇಂತಹ ಮಹನೀಯರಲ್ಲಿ ಮಂಜೇಶ್ವರದ ಗೋವಿಂದ ಪೈ ಕೂಡಾ ಓರ್ವರು. ಐತಿಹಾಸಿಕ ವಿಚಾರ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಸಂಶೋಧನೆ ನಡೆಸಿದ ಇವರ ಗಿಳಿವಿಂಡು ಸಮುಚ್ಚಯ ಒಂದು ಮಹೋನ್ನತ ಜ್ಞಾನ ದೇಗುಲದಂತಿದೆ ಎಂದು ಅವರು ಹೇಳಿದರು.


          ಲಕ್ಷ್ಮೀ ಗಣೇಶ್ ಪೆÇ್ರಡಕ್ಷನ್ಸ್ ಸುಗುಣ ರಘು ಭಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹಾಕವಿ ಚಲನಚಿತ್ರದ ಮಂಗಳವಾರ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ   ಚಿತ್ರಕಥೆ ಸಾಹಿತ್ಯದ ವಿಶೇಷ ಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

       ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮೂಹಕ್ಕೆ ಮಾದರಿ ಎನಿಸುವ ಸಿನಿಮಾಗಳು ನಮಗೆ ಬೇಕಿದೆ. ಸಮಾಜ ಘಾತುಕ, ಕುಖ್ಯಾತ ವ್ಯಕ್ತಿಯನ್ನು ವೈಭವೀಕರಿಸಿ ಪ್ರದರ್ಶಿಸಲ್ಪಡುವ ಸಿನಿಮಾಗಳು ನಮಗೆ ಬೇಕಿಲ್ಲ ಎಂದರು. ರಘು ಭಟ್ ನಿರ್ಮಾಪಕರಾಗಿ, ಗಣೇಶ್ ಕಾಸರಗೋಡು ಅವರ ಕಥೆ, ಚಿತ್ರಕಥೆ ಹೊಂದಿರುವ ಮಹಾಕವಿ ಸಿನಿಮಾ ಯುವ ಮನಸುಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು. 

          ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವದಿಸಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ ಗಡಿನಾಡು ಕನ್ನಡಿಗರ ಸಾಹಿತ್ತಿಕ ಶ್ರದ್ಧಾಕೇಂದ್ರ ಗಿಳಿವಿಂಡು ಸ್ಮಾರಕ. ಕೇವಲ ಗಡಿನಾಡಿಗೆ ಸೀಮಿತವಾಗಿರದ ಈ ಕೇಂದ್ರದ ಪ್ರಭೆ ಎಲ್ಲಡೆಗೂ ಹರಿಯಬೇಕಿದೆ. ಯುವ ಸಾಹಿತಿಗಳಿಗೆ ಸ್ಪೂರ್ತಿಯಾಗಿರುವ ಕೇಂದ್ರದಲ್ಲಿ ಕವಿ ನಮನದೊಂದಿಗೆ, ಕವಿಗಳ ಜೀವನ ಬದುಕನ್ನು ಸಾರುವ ಮಹಾಕವಿ ಸಿನಿಮಾ ನಿರ್ಮಾಣ ಯಶಸ್ಸನ್ನು ಕಾಣಲಿ ಎಂದು ಹರಿಸಿದರು. 

        ಮಹಾಕವಿ ಸಿನಿಮಾದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದ ಹಿರಿಯ ಸಿನಿಮಾ ವಿಮರ್ಶಕ ಗಣೇಶ್ ಕಾಸರಗೋಡು ಮಾತನಾಡಿ ಮಂಜೇಶ್ವರದ ಗೋವಿಂದ ಪೈ ಸ್ಮಾರಕದಲ್ಲಿ ಮಹಾಕವಿ ಸಿನಿಮಾ ಆರಂಭವಾಗಿರುವುದು ಖುಷಿ ತಂದಿದೆ. ತನ್ನ ನಲ್ವತ್ತು ವರ್ಷಗಳ ಸಿನಿಮಾ ಪತ್ರಿಕೋದ್ಯಮದಲ್ಲಿ ಯಾರು ತನ್ನಲ್ಲಿ ಒಂದು ಚಿತ್ರಕಥೆ, ಸಂಭಾಷಣೆಯನ್ನು ಬರೆಯಿರಿ ಎಂದಿರಲಿಲ್ಲ, ಆದರೆ ನಿವೃತ್ತಿಯ ಬಳಿಕ ಅಂತಹ ಒಂದು ದೊಡ್ಡ ಅವಕಾಶ ತನಗೆ ಪ್ರಾಪ್ತವಾಗಿದೆ. ರಘು ಭಟ್ ತನಗೆ ಪ್ರೀತಿಯಿಂದ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದೇನೆ ಎನ್ನುವ ನಂಬಿಕೆ ತನಗಿದೆ ಎಂದು ಹೇಳಿದರು. 

        ನಿರ್ಮಾಪಕರಾದ ರಘು ಭಟ್ ಅವರು ಕೂಡಾ ಸಿನಿಮಾದಲ್ಲಿ ಒಂದು ಪತ್ರಕರ್ತನ ಪಾತ್ರವನ್ನು ನಿರ್ವಹಿಸಬೇಕೆಂದು ಕೇಳಿಕೊಂಡರು. ಗೋವಿಂದ ಪೈ ಅವರು ಪತ್ರಕರ್ತರನ್ನು ಸಮೀಪಕ್ಕೆ ಬಿಡುತ್ತಿರಲಿಲ್ಲ, ಆದರೆ ಅವರಿಗೆ ನೇರಳೆ ಶಾಯಿ ಪೆನ್ನಿನ ಬಗ್ಗೆ ವಿಶೇಷ ಒಲವಿತ್ತು, ಆ ನೇರಳೆ ಶಾಯಿ ಪೆನ್ನಿನ ಮೂಲಕ ಓರ್ವ ಪತ್ರಿಕಾ ವರದಿಗಾರ ಮಹಾಕವಿಯನ್ನು ಹೇಗೆ ಸಮೀಪಿಸುತ್ತಾನೆ ಎಂಬ ಸನ್ನಿವೇಶವೂ ಸಿನಿಮಾದಲ್ಲಿರಲಿದೆ ಎಂದರು.

       ಮಂಜೇಶ್ವರ ಲೇಡಿ ಆಫ್ ಮರ್ಸಿ ಚರ್ಚ್ ಧರ್ಮಗುರು ವಿನೋದ್ ವಿನ್ಸೆಂಟ್ ಸಲ್ದಾನ, ಸಿನಿಮಾರಂಗದ ಯುವ ಸ್ಪೂರ್ತಿ ನಮಿತಾರಾವ್, ವಿಕ್ರಮ್ ಸೂರಿ, ಧರ್ಮದರ್ಶಿ ಮಂಜು ಭಟ್ ಇದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಗೋವಿಂದ ಪೈ ಅವರ ಪುತ್ಥಳಿಕೆ ಹಾರ ಹಾಕಿ ಗೌರವ ಸೂಚಿಸಲಾಯಿತು. ಎಡನೀರು ಶ್ರೀ ಸಚ್ಚಿದಾನಂದ ಸ್ವಾಮಿಗಳು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಕು. ಮೇಘಶ್ರೀ ಭರತನಾಟ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ನಿರ್ಮಾಪಕ ರಘು ಭಟ್ ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು, ಸಾಹಿತ್ಯಾಸಕ್ತರು, ಸಿನಿಮಾ ರಂಗದ ಸಿಬ್ಬಂದಿ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries