ನವದೆಹಲಿ : ಭಾರತೀಯರನ್ನು ಕೊರೊನಾ ಸೋಂಕಿನಿಂದ ಕಾಪಾಡಿದ್ದು ನೆಗಡಿ ಅಂದರೆ ನೀವು ನಂಬ್ತೀರಾ.
ಹೌದು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೊರೊನಾ ಸೋಣಕಿನಿಂದ ಭಾರಿ ಪ್ರಮಾಣದ ಸಾವು ಸಂಭವಿಸುತ್ತಿದ್ದು, ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಮಾಣ ಏಕೆ ಕಡಿಮೆ ಎಂಬುದಕ್ಕೆ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ ಹಾಗೂ ಏಮ್ಸ್ ಆಸ್ಪತ್ರೆಯ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚಿನ ಭಾರತೀಯರ ರಕ್ತದಲ್ಲಿರುವ ಸಿಡಿ4ಟಿ ಸೆಲ್ಸ್ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ. ಸಾರ್ಸ್ ಕೋವ್ 2 ಕೊರೊನಾ ವೈರಸ್‌ನ ಸ್ಫೈಕ್ ಪ್ರೋಟೀನ್‌ಗಳಿಂದ ಇವು ಸಂಪೂರ್ಣ ರಕ್ಷಣೆ ನೀಡದಿದ್ದರೂ ಈ ವೈರಸ್‌ನಿಂದ ಉಂಟಾಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಹೀಗಾಗಿ ಕೋವಿಡ್ 19 ಪೀಡಿತ ಭಾರತೀಯರಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದು ಅಧ್ಯಯನಕಾರರು ಫ್ರಂಟಿಯರ್ ಇನ್ ಇಮ್ಯುನಾಲಜಿ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಂಭವಿಸುವ ಸಾವಿನ ಪ್ರಮಾಣ ಶೇ.1.5 ಇದ್ದರೆ, ಅಮೆರಿಕದಲ್ಲಿ ಶೇ.3ಕ್ಕಿಂತಹೆಚ್ಚಿದೆ. ಮೆಕ್ಸಿಕೋದಲ್ಲಿ ಶೇ.10ಕ್ಕಿಂತ ಹೆಚ್ಚಿದೆ.
ಪಾಶ್ಚಾತ್ಯರಿಗಿಂತ ಹೆಚ್ಚಾಗಿ ಭಾರತೀಯರು ಮೊದಲೇ ಬೇರೆ ಬೇರೆ ರೀತಿಯ ಕೊರೊನಾವೈರಸ್‌ಗಳಿಗೆ ತುತ್ತಾಗಿದ್ದಾರೆ. ಅದರಿಂದ ನೆಗಡಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹೀಗಾಗಿ ಅವರಲ್ಲಿ ಟಿ ಸೆಲ್ಸ್ ಅಭಿವೃದ್ಧಿಯಾಗಿರುತ್ತವೆ. ಈ ಕೋಶಗಳು ಬೇರೆ ಬೇರೆ ಕೊರೊನಾ ವೈರಸ್‌ಗಳ ವಿರುದ್ಧ ತಕ್ಕಮಟ್ಟಿಗಿನ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ.