ನವದೆಹಲಿ: ಪತಂಜಲಿಯ ಕೊರೊನಿಲ್ ಔಷಧ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೊರೊನಾ ಸೋಂಕಿಗೆ ಮದ್ದಾಗಿ ಕೊರೊನಿಲ್ ಔಷಧಿ ಬಳಕೆ ಕುರಿತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಯಾವುದೇ ಅನುಮತಿ ನೀಡಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಮಾಹಿತಿ ನೀಡಿದೆ.
ಕೊರೊನಿಲ್ ಔಷಧಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಪತಂಜಲಿ ಬಿಡುಗಡೆ ಮಾಡಿತ್ತು. ಕೊರೊನಾ ಸೋಂಕನ್ನು ನಿವಾರಿಸಲು ಈ ಔಷಧ ಸಹಕಾರಿ ಎಂದು ಸಂಸ್ಥೆ ಮೊದಲು ಜಾಹೀರಾತು ನೀಡಿದ್ದು, ಈ ಬಗ್ಗೆ ಆಕ್ಷೇಪಗಳು ಕೇಳಿಬಂದ ನಂತರ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವ ಔಷಧ ಎಂದು ಹೇಳಿಕೊಂಡಿತ್ತು.
ಆನಂತರ ಪತಂಜಲಿ ಪರಿಚಯಿಸಲಾದ ಕೊರೊನಿಲ್ ಮಾತ್ರೆಗಳು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರಕು ಉತ್ಪಾದನಾ ನೀತಿಯ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. 158 ದೇಶಗಳು ಕೊರೊನಿಲ್ ಮಾರಾಟಕ್ಕೆ ಅನುಮತಿ ನೀಡಿವೆ. ಇದು ಐತಿಹಾಸಿಕ ಎಂದು ಸಂಸ್ಥೆ ಹೇಳಿಕೊಂಡಿತ್ತು.
ಕೊರೊನಿಲ್ ವೈಜ್ಞಾನಿಕ ಹಾಗೂ ಸಂಶೋಧನಾ ಆಧರಿತ ಔಷಧ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಔಷಧಿ ಹಾಗೂ ಪುರಾವೆ ದಾಖಲೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಇದರ ಬೆನ್ನಲ್ಲೇ, ತಾನು ಯಾವುದೇ ಪಾರಂಪರಿಕ ಔಷಧಿ ಪರಿಶೀಲನೆ ನಡೆಸಿಲ್ಲ ಎಂದು ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿತ್ತು.
ಇದೀಗ ಕೊರೊನಾ ಸೋಂಕಿಗೆ ಕೊರೊನಿಲ್ ಔಷಧಿ ಬಳಕೆ ಸಂಬಂಧ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಯಾವುದೇ ಅನುಮತಿ ದೊರೆತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಮತ್ತೊಮ್ಮೆ ಹೇಳಿದೆ. ಮಾಹಿತಿ ಹಕ್ಕಿನಡಿ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಪ್ರಶ್ನಿಸಿದ್ದು, ಅರ್ಜಿ ಕುರಿತು ಪರಿಶೀಲಿಸಿ, ಆಯುಷ್ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ. ಕೊರೊನಿಲ್‌ಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.