ನವದೆಹಲಿ: ಅಮೆರಿಕಾದ ಬಾಹ್ಯಾಕಾಶ ಏಜನ್ಸಿ ನಾಸಾದ ಪರ್ಸಿವರೆನ್ಸ್ ಮಾರ್ಸ್ ರೋವರ್ ನೌಕೆ ಉಡ್ಡಯನಗೊಂಡು ಸುಮಾರು ಏಳು ತಿಂಗಳುಗಳ ನಂತರ ಮಂಗಳನ ಅಂಗಳವನ್ನು ಫೆ. 19ರಂದು ತಲುಪಿ ಅಲ್ಲಿನ ಜೆಝಿರೋ ಎಂಬ ಮಹಾಕುಳಿಯಲ್ಲಿ (ಕ್ರೇಟರ್) ಯಶಸ್ವಿಯಾಗಿ ಇಳಿದಿತ್ತು.
ನಾಸಾದ ಈ ಮಹತ್ವಾಕಾಂಕ್ಷೆಯ ಹಾಗೂ 3 ಬಿಲಿಯನ್ ಡಾಲರ್ ವೆಚ್ಚದ ಲೈಫ್ ಆನ್ ಮಾರ್ಸ್ ಮಿಷನ್ ನಿಯಂತ್ರಣಾ ಕೆಲಸವನ್ನು ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಲಂಡನ್‍ನ ತಮ್ಮ ಒಂದು ಬೆಡ್‍ರೂಂ ಅಪಾರ್ಟ್‍ಮೆಂಟ್‍ನಿಂದ ನಿರ್ವಹಿಸುತ್ತಿದ್ದಾರೆ.
ನಾಸಾ ವಿಜ್ಞಾನಿ ಪ್ರೊ. ಸಂಜೀವ್ ಗುಪ್ತಾ ಅವರು ದಕ್ಷಿಣ ಲಂಡನ್‍ನ ಲೆವಿಶಾಮ್ ಪ್ರದೇಶದಲ್ಲಿನ ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ಕುಳಿತು ಈ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಅವರು ಮಿಷನ್ ಕಂಟ್ರೋಲ್ ಇರುವ ಕ್ಯಾಲಿಫೋರ್ನಿಯಾದಲ್ಲಿ ಕುಳಿತುಕೊಂಡು ಈ ಕೆಲಸ ನಿರ್ವಹಿಸಬೇಕಿದ್ದರೂ ಕೋವಿಡ್ ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಿಲ್ಲ.
''ನಾನು ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯಲ್ಲಿರಬೇಕಿತ್ತು. ಇಲ್ಲಿನ ಸ್ಥಳಕ್ಕಿಂತ ಮೂರು ಪಟ್ಟು ದೊಡ್ಡದಿರುವ ಹಾಗೂ ತಮ್ಮ ಲ್ಯಾಪ್ ಟಾಪ್‍ಗಳಲ್ಲಿಯೇ ಮಗ್ನರಾಗಿರುವ ಹಾಗೂ ನೂರಾರು ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಕಾರ್ಯನಿರ್ವಹಿಸುವ ಹಾಗೂ ದೊಡ್ಡ ಸ್ಕ್ರೀನ್‍ಗಳಿರುವ ಹಲವಾರು ಕಚೇರಿಗಳಿರುವ ಸ್ಥಳದಲ್ಲಿ ನಾನು ಕೆಲಸ ಮಾಡಬೇಕಿತ್ತು'' ಎಂದು ಸಂಜೀವ್ ಗುಪ್ತಾ ಹೇಳುತ್ತಾರೆ.
ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿದ ನಂತರ ಅವರು ತಮ್ಮ ಪತ್ನಿ ಮತ್ತು ಮಕ್ಕಳಿಗೆ ತೊಂದರೆಯಾಗದೇ ಇರಲೆಂದು ಪ್ರತ್ಯೇಕ ಒಂದು ಬೆಡ್‍ರೂಂ ಫ್ಲ್ಯಾಟ್ ಅನ್ನು ಲೆವಿಶಾಮ್‍ನಲ್ಲಿ ಬಾಡಿಗೆಗೆ ಪಡೆದುಕೊಳ್ಳಲು ನಿರ್ಧರಿಸಿದ್ದರು.
ಅವರ ಈ ಬಾಡಿಗೆ ಫ್ಲ್ಯಾಟ್ ಅನ್ನು ಅವರು ಮಿನಿ ಕಂಟ್ರೋಲ್ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಕನಿಷ್ಠ ಐದು ಕಂಪ್ಯೂಟರ್ ಗಳು ಹಾಗೂ ನಾಸಾ ವಿಜ್ಞಾನಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ಗಾಗಿ ಎರಡು ಸ್ಕ್ರೀನ್‍ಗಳೂ ಇವೆ.
ನಾಸಾದ ಪರ್ಸಿವರೆನ್ಸ್ ಮಾರ್ಸ್ ರೋವರ್ ಮಿಷನ್‍ನ ಪ್ರಮುಖ ವಿಜ್ಞಾನಿಗಳಲ್ಲೊಬ್ಬರಾಗಿರುವ ಪ್ರೊ. ಗುಪ್ತಾ ಅವರು ಲಂಡನ್‍ನ ಇಂಪೀರಿಯಲ್ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರ ತಜ್ಞರಾಗಿದ್ದಾರೆ.
ಸುಮಾರು 400 ವಿಜ್ಞಾನಿಗಳ ತಂಡದೊಂದಿಗೆ ಅವರು ಮಂಗಳನ ಅಂಗಳದಲ್ಲಿ ಸ್ಯಾಂಪಲ್‍ಗಳನ್ನು ಸಂಗ್ರಹಿಸುವ ಸಲುವಾಗಿ ಪರ್ಸಿವರೆನ್ಸ್ ರೋವರ್ ಗೆ ಡ್ರಿಲ್ಲಿಂಗ್ ಮಾಡಲು ಸೂಚನೆ ನೀಡುತ್ತಿದ್ದಾರೆ. ಹೀಗೆ ಸಂಗ್ರಹಿಸಲಾಗುವ ಸ್ಯಾಂಪಲ್‍ಗಳನ್ನು 2027ರೊಳಗಾಗಿ ಮರಳಿ ಭೂಮಿಗೆ ಸಾಗಿಸಲಾಗುವುದು ಎಂದು ವಿವರಿಸಿದ್ದಾರೆ.