ನವದೆಹಲಿ: ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಶಿಕ್ಷಣ ಸಚಿವಾಲಯ ಚಿಂತನೆ ನಡೆಸುತ್ತಿದೆ
.
ಭಾರತದಲ್ಲಿ ಅಧ್ಯಯನ ಯೋಜನೆ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
ಅಗತ್ಯ ಮೂಲಸೌಕರ್ಯಗಳು ಮತ್ತು ಅಕಾಡೆಮಿಕ್ ಗುಣಮಟ್ಟ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಕುರಿತ ಮಾನದಂಡಗಳನ್ನು ಶೀಘ್ರ ಪರಿಷ್ಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ತಿಳಿಸಿದ್ದಾರೆ.
'ಭಾರತದಲ್ಲಿ ಅಧ್ಯಯನ' ಕೇಂದ್ರ ಸರ್ಕಾರದ ಯೋಜನೆಯಾಗಿದೆ. ದೇಶದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಯೋಜನೆ ಇದಾಗಿದೆ. 2018ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದ್ದು, ಆಯ್ದ 117 ಸಂಸ್ಥೆಗಳು ಸಹಭಾಗಿತ್ವ ಹೊಂದಿವೆ.
ಈ ಯೋಜನೆ ಅಡಿಯಲ್ಲಿ ಇದುವರೆಗೆ 50 ದೇಶಗಳ 7,500 ವಿದ್ಯಾರ್ಥಿಗಳು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ.