ನವದೆಹಲಿ: ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರೈತರ ಹೋರಾಟ ಸದ್ದು ಮಾಡುತ್ತಿದ್ದು, ಗ್ರಾಮಿ ವೇದಿಕೆಯಲ್ಲಿ ರೈತರ ಹೋರಾಟದ ಪರ ಕೂಗು ಕೇಳಿಬರುತ್ತಿದೆ.
ಈ ಹಿಂದೆ ಖ್ಯಾತ ಪೋರ್ನ್ ತಾರೆ ಮಿಯಾ ಖಲೀಫಾ, ಖ್ಯಾತ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾಥನ್ಬರ್ಗ್ ಸೇರಿದಂತೆ ವಿವಿಧ ಗಣ್ಯರು ಭಾರತದ ರೈತರ ಹೋರಾಟದ ಪರ ಧನಿ ಎತ್ತಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಅಂತಹುದೇ ಮತ್ತೊಂದು ಪ್ರಯತ್ನ ಗ್ರಾಮಿ ವೇದಿಕೆಯಲ್ಲಿ ಕಂಡುಬಂದಿದ್ದು, ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಗ್ರಾಮಿ ರೆಡ್ ಕಾರ್ಪೆಟ್ ವೇದಿಕೆಯಲ್ಲಿ 'ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್' ಬರಹವಿರುವ ಮಾಸ್ಕ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.
ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಂತೆಯೇ ಈ ಕುರಿತು ಟ್ವೀಟ್ ಮಾಡಿರುವ ಆಕೆ.. ನನಗೆ ಗೊತ್ತಿತ್ತು.. ಗ್ರಾಮಿ ರೆಡ್ ಕಾರ್ಪೆಟ್ ವೇದಿಕೆ ಎಂದಿಗೂ ಹೆಚ್ಚು ಮಾಧ್ಯಮ ಪ್ರಚಾರ ಪಡೆಯುತ್ತದೆ. ಯಾವುದೇ ವಿಚಾರ ಹಂಚಿಕೊಳ್ಳಲು ಇದು ಉತ್ತಮ ವೇದಿಕೆ ಎಂದೆನಿಸಿತು...ಅಂತೆಯೇ ನಿಮ್ಮ ಭಾವನೆ ಹಂಚಿಕೊಳ್ಳಲು ನೀವೂ ಕೂಡ ಸ್ವತಂತ್ರ್ಯ ಎಂದು ಹೇಳಿದ್ದಾರೆ.
ಫೋಟೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಆ ಫೋಟೋಗಳಿಗೆ ಸುಮಾರು 52 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಈ 52 ಸಾವಿರ ಮಂದಿಯ ಪೈಕಿ ರೂಪದರ್ಶಿ ಅಮಂಡಾ ಸೆರ್ನಿ, ಖ್ಯಾತ WWE ರೆಸ್ಲರ್ ಸುನೀಲ್ ಸಿಂಗ್ ಕೂಡ ಇದ್ದಾರೆ ಎಂಬುದು ವಿಶೇಷ..
ಕೇಂದ್ರ ಸರ್ಕಾರದ ವಿವಾಧಿತ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಸರ್ಕಾರ ಕಾನೂನುಗಳನ್ನು ಹಿಂದಕ್ಕೆ ಪಡೆಯುವವರೆಗೂ ತಾವೂ ಕೂಡ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ನಿನ್ನೆ ಮಾತನಾಡಿದ್ದ ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಸಂಸತ್ ನಲ್ಲೇ ಮಂಡಿ ತೆರೆದು, ದೆಹಲಿಗೆ ಟ್ರಾಕ್ಟರ್ ಗಳನ್ನು ತರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.