ಅತ್ಯಂತ ವಿಕಸಿತ ಮನುಷ್ಯನನ್ನು ಸೃಷ್ಟಿಸಿದ ಸೃಷ್ಟಿಕರ್ತನು ಅವನನ್ನು ಹತಮಾಡುವ ರೋಗಾಣುಗಳನ್ನೂ ಸೃಷ್ಟಿಸಿದ. ಹಾಗೆಯೇ ದೇಹವನ್ನು ಪ್ರವೇಶಿಸುವ ರೋಗಾಣುಗಳನ್ನು ನಿಯಂತ್ರಿಸಲು ಸುವ್ಯವಸ್ಥಿತ ಪ್ರತಿರಕ್ಷಣಾ ವ್ಯವಸ್ಥೆಯನ್ನೂ (ರೋಗನಿರೋಧಕ ವ್ಯವಸ್ಥೆ) ಸೃಷ್ಟಿಸಿದ. ಇದೆಂಥ ವಿರೋಧಾಭಾಸ! ಅವನೇ ಬಲ್ಲ.
ರೋಗನಿರೋಧಕ ವ್ಯವಸ್ಥೆ: ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ದೇಹವನ್ನು ಪ್ರವೇಶಿಸಿದ ನಂತರ ರೋಗನಿರೋಧಕ ವ್ಯವಸ್ಥೆ ಇವುಗಳನ್ನು ಗುರುತಿಸಿ ಕೊಲ್ಲುವ ಜೀವಕೋಶಗಳು ಮತ್ತು ಅಥವಾ ನಿರೋಧಕ ವಸ್ತುಗಳು (ಆಂಟಿಬಾಡೀಸ್) ಉತ್ಪತ್ತಿಯಾಗಿ ರೋಗಾಣುಗಳು ಕೊಲ್ಲಲ್ಪಡುತ್ತವೆ. ರೋಗಾಣುಗಳೂ ತಮ್ಮದೇ ಆದ ನಿರೋಧಕ ವ್ಯವಸ್ಥೆ ಹೊಂದಿವೆ. ಮನುಷ್ಯನ ನಿರೋಧಕ ವ್ಯವಸ್ಥೆ ಮತ್ತು ರೋಗಾಣುಗಳ ನಿರೋಧಕ ವ್ಯವಸ್ಥೆಗಳ ನಡುವೆ ಸಂಘರ್ಷವೇ ಜರುಗಿ ರೋಗಾಣುಗಳ ನಿರೋಧಕ ವ್ಯವಸ್ಥೆ ಮೇಲುಗೈ ಪಡೆದಲ್ಲಿ ಕಾಯಿಲೆ ಉಂಟಾಗುತ್ತದೆ. ಇಲ್ಲದಿದ್ದಲ್ಲಿ ರೋಗಾಣುಗಳು ಹತವಾಗಿ ರೋಗೋತ್ಪತ್ತಿಯಾಗುವುದಿಲ್ಲ. ಈ ಸಂಘರ್ಷದ ಅವಧಿಯಲ್ಲಿ ಅಂಗಾಂಶಗಳು ಹಾನಿಗೊಳ್ಳುತ್ತವೆ.
ಯಾವುದೇ ರೋಗಾಣು ದೇಹವನ್ನು ಪ್ರವೇಶಿಸುವ ಮುನ್ನ ಅದರ ವಿರುದ್ಧದ ನಿರೋಧಕ ಜೀವಕೋಶಗಳಾಗಲೀ ಅಥವಾ ನಿರೋಧಕ ವಸ್ತುಗಳಾಗಲೀ ಸಾಮಾನ್ಯವಾಗಿ ದೇಹದಲ್ಲಿರುವುದಿಲ್ಲ. ಸೋಂಕಾಣುಗಳು ದೇಹವನ್ನು ಪ್ರವೇಶಿಸಿದ ಕೆಲಕಾಲಗಳ ನಂತರ ಇವು ಉತ್ಪತ್ತಿಯಾಗುತ್ತವೆ. ಈ ನಡುವಿನ ಅವಧಿಯಲ್ಲಿ ಅವುಗಳಿಂದ ಆಗುವ ಅನಾಹುತ ಆಗಿಯೇ ತೀರುತ್ತದೆ.
ರೋಗನಿರೋಧೀಕರಣ (ಇಮ್ಯುನೈಜೇಷನ್): ಸೋಂಕು ಉಂಟಾಗುವ ಮುನ್ನವೇ ತೀವ್ರ ಸೋಂಕನ್ನು ಉಂಟುಮಾಡದ ಸೋಂಕಾಣುಗಳನ್ನು ಲಸಿಕೆ ರೂಪದಲ್ಲಿ ದೇಹಕ್ಕೆ ನೀಡಿ ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸಿ, ಸಂಬಂಧಿಸಿದ ಸೋಂಕಾಣುಗಳ ವಿರುದ್ಧ ನಿರೋಧಕ ವಸ್ತುಗಳನ್ನು ಉಂಟುಮಾಡಿ, ನಿರ್ದಿಷ್ಟ ಸೋಂಕಾಣುಗಳು ದೇಹವನ್ನು ಆವರಿಸಿದ ತಕ್ಷಣ ಅವುಗಳನ್ನು ನಿಷ್ಕ್ರಿಯಗೊಳಿಸುವ ಅಥವಾ ಕೊಲ್ಲುವ ಕ್ರಿಯೆಯನ್ನು ರೋಗನಿರೋಧಿಕರಣ (ಇಮ್ಯುನೈಜೇಶನ್) ಎನ್ನಲಾಗುತ್ತದೆ.
ಕೋವಿಡ್ ಲಸಿಕೆ: ಕೋವಿಡ್-19 ಲಸಿಕೆ ರೋಗವನ್ನು ಉಂಟುಮಾಡದ, ಆದರೆ ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸಿ ಕೋವಿಡ್-19 ವೈರಾಣುಗಳ ವಿರುದ್ಧ ನಿರೋಧಕ ವಸ್ತುಗಳನ್ನುಂಟುಮಾಡುವ ನಿಷ್ಕ್ರಿಯಕ ಕೋವಿಡ್-19 ರೋಗಾಣುಗಳನ್ನು ಹೊಂದಿದೆ. ಇದರಿಂದ ಲಸಿಕೆ ಪಡೆದು ರೋಗನಿರೋಧೀಕರಣಗೊಂಡವರಲ್ಲಿ ದೇಹದಲ್ಲಿ ನಿರೋಧಕ ವಸ್ತುಗಳಿದ್ದು, ಕೋವಿಡ್-19 ವೈರಾಣು ದೇಹವನ್ನು ತಲುಪಿಸಿದಾಕ್ಷಣ ಅವು ಕೊಲ್ಲಲ್ಪಡುತ್ತವೆ.
ಭಾರತದಲ್ಲಿ ತಯಾರಾದ ಲಸಿಕೆಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ವಿಧದ ಲಸಿಕೆಗಳಿದ್ದು, ಇವುಗಳನ್ನು ತಯಾರಿಸುವ ರೀತಿಯಲ್ಲಿ ವಿಭಿನ್ನತೆಗಳಿವೆ. ಕೋವ್ಯಾಕ್ಸಿನ್ ಪೂರ್ಣ ವೈರಾನ್ ಅನ್ನು ನಿಷ್ಕ್ರಿಯಗೊಳಿಸುವಿಕೆಯಿಂದ ತಯಾರಾಗಿದ್ದು, ಕೋವಿಶೀಲ್ಡ್ ರೀಕಾಂಬಿನೆಂಟ್ ತಂತ್ರಜ್ಞಾನದಿಂದ ತಯಾರಾಗಿದ್ದು, ಇವೆರಡೂ ಪರಿಣಾಮಕಾರಿಯಾಗಿವೆ. ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕಾಗಿದ್ದು, ಗಂಭೀರ ಸ್ವರೂಪದ ಮಾರಣಾಂತಿಕವಾಗಬಲ್ಲ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಮೊದಲು ತೆಗೆದುಕೊಂಡ ವಿಧದ ಲಸಿಕೆಯನ್ನೇ ಎರಡನೇ ಬಾರಿಯೂ ತೆಗೆದುಕೊಳ್ಳಬೇಕು. ಉದಾ: ಮೊದಲು ಕೋವಿಶೀಲ್ಡ್ ತೆಗೆದುಕೊಂಡಲ್ಲಿ ಎರಡನೇ ಬಾರಿಯೂ ಅದನ್ನೇ ಪಡೆಯಬೇಕು.
ಅಡ್ಡ ಪರಿಣಾಮಗಳು: ಎಲ್ಲ ಲಸಿಕೆಗಳಲ್ಲಿ ಉಂಟಾಗುವಂತೆ ಇದರಲ್ಲೂ ಲಸಿಕೆ ಪಡೆದ ನಂತರ ಅಲರ್ಜಿ, ಜ್ವರ, ಮೈ ಕೈ ನೋವು, ವಾಂತಿ, ಹೊಟ್ಟೆನೋವು, ತಲೆಸುತ್ತುಗಳು ಉಂಟಾಗಬಹುದು. ಇವು ಲಸಿಕೆ ಪ್ರಭಾವಶಾಲಿಯಾಗಿದೆ ಎಂಬುದರ ಸೂಚಕಗಳು.
ಯಾರಿಗೆ ಬೇಡ?: ಗರ್ಭಿಣಿಯರು ಮತ್ತು ಹಾಲುಣಿಸುವವರು, 18 ವರ್ಷದೊಳಗಿನ ಮಕ್ಕಳು, ಕ್ಯಾನ್ಸರ್ ಮತ್ತು ಸ್ಟಿರಾಯ್್ಡ ಔಷಧಗಳನ್ನು ಸೇವಿಸುತ್ತಿರುವವರು, ಅಲರ್ಜಿ ಮಾಹಿತಿ ಇರುವವರು, ಗಂಭೀರ ಸ್ವರೂಪದ ಕಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಬಾರದು. ಎಷ್ಟು ಅವಧಿಗೆ ಈ ಲಸಿಕೆ ಪರಿಣಾಮಕಾರಿ ಎಂಬುದನ್ನು ಕಾಲ ನಿರ್ಧರಿಸಬೇಕಾಗಿದೆ. ಅಂತೂ ಕಾಯಿಲೆ ಕಾಣಿಸಿಕೊಂಡ ಒಂದು ವರ್ಷದೊಳಗೆ ಸ್ವದೇಶಿ ಲಸಿಕೆ ಲಭಿಸಿರುವುದು ನಮ್ಮ ದೇಶದ ಆಧುನಿಕ ತಂತ್ರಜ್ಞಾನದ ಹಿರಿಮೆಗೆ ಹಿಡಿದ ಕೈಗನ್ನಡಿ. ಲಸಿಕೆಗಳಿಂದ ಪೋಲಿಯೋ ಮತ್ತು ಸಿಡುಬು ರೋಗಗಳು ನಿಮೂಲನವಾದಂತೆ ಕೋವಿಡ್-19 ಸಹ ನಿಮೂಲನಗೊಳ್ಳುವುದೆಂದು ಆಶಿಸೋಣ.