ನವದೆಹಲಿ: ಸ್ವೀಡನ್ ನ ಸ್ಕಾನಿಯಾ ಬಸ್ ಹಾಗೂ ಟ್ರಕ್ ತಯಾರಿಕಾ ಕಂಪನಿಗೂ, ತಮ್ಮ ಪುತ್ರರಿಗೂ ಸಂಬಂಧವಿದೆ ಎಂದು ಕೇಳಿಬರುತ್ತಿರುವ ಆರೋಪಗಳನ್ನು ಕೇಂದ್ರ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಖಂಡಿಸಿದ್ದಾರೆ.
ಸ್ಕ್ಯಾನಿಯಾ ಕಂಪನಿ 2016ರಲ್ಲಿ ವಿಶೇಷ ಐಷಾರಾಮಿ ಬಸ್ ಗಳನ್ನು ಭಾರತದ ಕಂಪನಿಯೊಂದಕ್ಕೆ ನೀಡಿತ್ತು. ಈ ಸಂಬಂಧ ಗಡ್ಕರಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದ್ದು. ಈ ಆರೋಪಗಳು ದುರದೃಷ್ಟಕರ, ಕಾಲ್ಪನಿಕ ಹಾಗೂ ಆಧಾರರಹಿತ ಎಂದು ತಿಳಿಸಿದೆ. ಬಸ್‌ಗೆ ಹಣವನ್ನು ಪಾವತಿಸದೆ, ನಿತಿನ್ ಗಡ್ಕರಿ ಪುತ್ರಿ ಮದುವೆಗೆ ಬಳಸಲಾಗಿದೆ ಎಂಬ ಮಾಧ್ಯಮಗಳ ವರದಿ ಉಹಾಪೋಹ ಎಂದು ಹೇಳಿದ್ದಾರೆ.
ಸ್ಕ್ಯಾನಿಯಾ ಬಸ್ ಪ್ರಕರಣ ಸ್ವೀಡನ್‌ನಲ್ಲಿರುವ ಆ ಸಂಸ್ಥೆಯ ಆಂತರಿಕ ವಿಷಯವಾಗಿದೆ. ಸ್ಕ್ಯಾನಿಯಾ ಇಂಡಿಯಾದ ಅಧಿಕೃತ ಹೇಳಿಕೆಗಾಗಿ ಮಾಧ್ಯಮಗಳು ಕಾಯುವುದು ಉತ್ತಮ ಎಂದು ಗಡ್ಕರಿ ಕಚೇರಿ ಹೇಳಿದೆ. ಬಸ್ ಖರೀದಿ ಅಥವಾ ಮಾರಾಟಕ್ಕೂ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಹಸಿರು ಸಾರ್ವಜನಿಕ ಸಾರಿಗೆ ಜಾರಿಗೆ ತರುವ ತಮ್ಮ ಯೋಜನೆಯ ಭಾಗವಾಗಿ ನಿತಿನ್ ಗಡ್ಕರಿ ನಾಗ್ಪುರದಲ್ಲಿ ಎಥೆನಾಲ್ ಚಾಲಿತ ಸ್ಕ್ಯಾನಿಯಾ ಬಸ್ಸುಗಳ ಸಂಚಾರ ಆರಂಭಿಸುವ ಪರವಾಗಿದ್ದರು ಎಂದು ಅದು ಹೇಳಿದೆ.
ಪ್ರಾಯೋಗಿಕ ಯೋಜನೆಯನ್ನಾಗಿ ಆರಂಭಿಸಲು ಅವರು ನಾಗ್ಪುರ ಮಹಾನಗರ ಪಾಲಿಕೆಯನ್ನು ಪ್ರೋತ್ಸಾಹಿಸಿದ್ದರು. ಇದರೊಂದಿಗೆ ನಾಗ್ಪುರ ಪುರಸಭೆ ಸ್ವೀಡಿಷ್ ಕಂಪನಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡವು, ಆ ನಂತರ ಸ್ಕ್ಯಾನಿಯಾ ಎಥೆನಾಲ್ ಬಸ್ಸುಗಳು ನಾಗ್ಪುರದಲ್ಲಿ ಸಂಚರಿಸುತ್ತಿವೆ. ಆದರೆ, ಈ ಒಪ್ಪಂದ ಸಂಪೂರ್ಣವಾಗಿ ನಾಗ್ಪುರ ಪುರಸಭೆ ಹಾಗೂ ಸ್ವೀಡನ್ ಬಸ್ ತಯಾರಕರ ನಡುವೆ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ವೀಡನ್ ನ ಬಸ್ ಹಾಗೂ ಟ್ರಕ್ ತಯಾರಕ ಸಂಸ್ಥೆ ಸ್ಕಾನಿಯಾ 2013 ಹಾಗೂ 2016 ನಡುವಿನ ಅವಧಿಯಲ್ಲಿ ಭಾರತದಲ್ಲಿ ಏಳು ರಾಜ್ಯಗಳಿಗೆ ಬಸ್ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಳ್ಳಲು ಲಂಚ ನೀಡಿತ್ತು ಎಂದು ಸ್ವೀಡನ್ ಸುದ್ದಿ ವಾಹಿನಿ ಎಸ್ ವಿಟಿ ಸೇರಿದಂತೆ ಮೂರು ಮಾಧ್ಯಮ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಬಹಿರಂಗಪಡಿಸಿದ್ದವು.