ತಿರುವನಂತಪುರಂ, : ಚುನಾವಣೆಗೆ ಇನ್ನು ಒಂದು ವಾರ ಬಾಕಿ ಇರುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಐದು ವರ್ಷದ ಹಿಂದೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿ ಸೀಟನ್ನು ಗೆದ್ದಿತ್ತು. ಈ ಬಾರಿ ಬಿಜೆಪಿಯ ಖಾತೆಯನ್ನು ಮುಚ್ಚಿಬಿಡುವುದಾಗಿ ಅವರು ಹೇಳಿದ್ದಾರೆ.
ನೆಮಾಮ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದ ಒಂದೇ ಒಂದು ವಿಧಾನಸಭೆ ಸೀಟಿನ ಕುರಿತು ಮಾತನಾಡಿರುವ ಪಿಣರಾಯಿ, 'ಕಾಂಗ್ರೆಸ್ ಜತೆಗಿನ ಮ್ಯಾಚ್ ಫಿಕ್ಸಿಂಗ್ ಮೂಲಕ ಬಿಜೆಪಿಯು ಕೇರಳದಲ್ಲಿ ತನ್ನ ಮೊಟ್ಟ ಮೊದಲ ಖಾತೆ ತೆರೆದಿತ್ತು. ಆದರೆ ಈ ಬಾರಿ ಅವರ ಖಾತೆಯನ್ನು ಖಂಡಿತವಾಗಿಯೂ ಮುಚ್ಚಿಹಾಕುತ್ತೇವೆ' ಎಂದಿದ್ದಾರೆ.
ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಮತ ಹಂಚಿಕೆಯು ತೀವ್ರವಾಗಿ ಕಡಿಮೆಯಾಗಲಿದೆ ಎಂದು ಪಿಣರಾಯಿ ಭವಿಷ್ಯ ನುಡಿದಿದ್ದಾರೆ.
ಇದಕ್ಕೂ ಮುನ್ನ ಕೇರಳದ ಪಾಲಕ್ಕಾಡ್‌ನಲ್ಲಿ ಇ. ಶ್ರೀಧರನ್ ಅವರ ಪರ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಕೇರಳದಲ್ಲಿ ವಿರೋಧಪಕ್ಷ ಯುಡಿಎಫ್ ಮತ್ತು ಆಡಳಿತಾರೂಢ ಎಲ್‌ಡಿಎಫ್ ನಡುವೆ ಇರುವುದು ಹೆಸರಿನ ವ್ಯತ್ಯಾಸವಷ್ಟೇ. ಈ ಎರಡರ ನಡುವೆ ಹಲವು ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಟೀಕಿಸಿದ್ದರು.
ಪಿಣರಾಯಿ ಸರ್ಕಾರದ ಚಿನ್ನ ಕಳ್ಳಸಾಗಣೆ ಹಗರಣದ ಕುರಿತು ಪ್ರಸ್ತಾಪಿಸಿದ್ದ ಮೋದಿ, 'ಕೆಲವು ಬೆಳ್ಳಿ ತುಂಡುಗಳಿಗಾಗಿ ಏಸು ಕ್ರಿಸ್ತನನ್ನು ಜುಡಾಸ್ ವಂಚಿಸಿದ್ದರು. ಅದೇ ರೀತಿ ಚಿನ್ನದ ಕೆಲುವು ತುಣಕುಗಳಿಗಾಗಿ ಕೇರಳವನ್ನು ಎಲ್‌ಡಿಎಫ್ ವಂಚಿಸಿದೆ' ಎಂದು ವ್ಯಂಗ್ಯವಾಡಿದ್ದರು.