.
ಆಲುವ: ಏಜೆಂಟ್ ಮೂಲಕ ಕಾಯ್ದಿರಿಸಲಾದ ಲಾಟರಿ ಟಿಕೆಟ್‍ಗೆ ಆರು ಕೋಟಿ ರೂ. ಮೊತ್ತದ ಬಂಪರ್ ಬಹುಮಾನ ಲಭಿಸಿದ್ದು, ಆಲುವ ನಿವಾಸಿ ಪಿ.ಕೆ ಚಂದ್ರನ್ ಅವರಿಗೆ ಭಾಗ್ಯ ದೇವತೆ ಈ ಪರಿಯಾಗಿ ಒಲಿದಿದ್ದಾಳೆ. ಕೇರಳ ಸರ್ಕಾರದ ಸಮ್ಮರ್ ಬಂಪರ್ ಲಾಟರಿಯ ಮೂಲಕ ಈ ಮೊತ್ತ ಲಭಿಸಿದೆ. ಭಾನುವಾರ ಲಾಟರಿ ಡ್ರಾ ನಡೆದಿದ್ದು, ಇವರು ಖರೀದಿಸಿದ್ದ ಎಸ್.ಡಿ 316142 ನಂಬರ್‍ಗೆ ಈ ಅದೃಷ್ಟ ಒಲಿದಿದೆ.
ನಿತ್ಯ ಲಾಟರಿ ಟಿಕೆಟ್ ಖರೀದಿಸುತ್ತಿರುವ ಚಂದ್ರನ್, ಆಲುವಾದ ಪಟ್ಟಿಮಟ್ಟಂ ವಲಂಬೂರಿನ ಲಾಟರಿ ಏಜೆಂಟ್ ಸ್ಮಿಜಾಮೋಹನ್ ಅವರಲ್ಲಿ ಆ ನಂತರ ಹಣ ನೀಡುವುದಾಗಿ ತಿಳಿಸಿ ಸಮ್ಮರ್ ಬಂಪರ್‍ನ ಒಂದು ಟಿಕೆಟ್ ತೆಗೆದಿರಿಸುವಂತೆ ಸೂಚಿಸಿದ್ದರು. ಸಮ್ಮರ್ ಬಂಪರ್‍ನ 12 ಟಿಕೆಟ್ ಬಾಕಿ ಉಳಿದಿರುವಂತೆ ಭಾನುವಾರ ಬೆಳಗ್ಗೆ ಏಜೆಂಟ್ ಸ್ಮಿಜಾಮೋಹನ್ ನಿತ್ಯ ಟಿಕೆಟ್ ಖರೀದಿಸುತ್ತಿರುವ ತನ್ನ ಗ್ರಾಹಕರಿಗೆ ಮೊಬೈಲ್ ಮೂಲಕ ಕರೆಮಾಡಿ ಟಿಕೆಟ್ ಖರೀದಿಸುವಂತೆ ಸೂಚಿಸಿದ್ದರು. ಸಂಜೆ ವೇಳೆ ಫಲಿತಾಂಶ ಪ್ರಕಟಗೊಂಡಾಗ ಚಂದ್ರನ್‍ಗಾಗಿ ತೆಗೆದಿರಿಸಿದ್ದ 316142 ನಂಬರ್‍ನ ಟಿಕೆಟ್‍ಗೆ ಬಂಪರ್ ಬಹುಮಾನ ಬಂದಿತ್ತು. ತಕ್ಷಣ ಟಿಕೆಟ್‍ನೊಂದಿಗೆ ಸ್ಮಿಜಾಮೋಹನ್ ಅವರು ಚಂದ್ರನ್ ಅವರ ಮನೆಗೆ ತೆರಳಿ, ಬಂಪರ್‍ಬಹುಮಾದ ಟಿಕೆಟ್ ಹಸ್ತಾಂತರಿಸಿ, ಟಿಕೆಟ್ ಮೊತ್ತ 200 ರೂ. ಪಡೆದುಕೊಂಡಿದ್ದಾರೆ. ಸಮಿಜಾ ಅವರ ಪ್ರಾಮಾಣಿಕತೆ ತನಗೆ ಆರು ಕೋಟಿ ಮೊತ್ತದ ಬಂಪರ್ ಬಹುಮಾನ ಲಭಿಸಲು ಕಾರಣವಾಗಿರುವುದಾಗಿ ಚಂದ್ರನ್ ತಿಳಿಸಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು ಒಬ್ಬ ಪುತ್ರನನ್ನೊಳಗೊಂಡ ಕುಟುಂಬ ಇವರದ್ದಾಗಿದ್ದು, ಹಿರಿಯ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ಹಿರಿಯ ಪುತ್ರಿಗೆ ಮನೆ ನಿರ್ಮಾಣ ನಡೆಯುತ್ತಿದ್ದು, ಆರ್ಥಿಕ ಅಡಚಣೆಯಿರುವುದರಿಂದ ಆಕೆಗೂ ಸಹಾಯ ಮಾಡಬೇಕಾಗಿದೆ. ಎರಡನೇ ಪುತ್ರಿಯ ವಿವಾಹ ನಡೆಸಿಕೊಡುವುದರ ಜತೆಗೆ ಬಿ.ಟೆಕ್ ಶಿಕ್ಷಣ ಪಡೆಯುತ್ತಿರುವ ಪುತ್ರನಿಗೆ ಶಿಕ್ಷಣ ವೆಚ್ಚ ಭರಿಸುವುದಿದೆ ಎಂದು ಚಂದ್ರನ್ ತಿಳಿಸಿದ್ದಾರೆ.