ನವದೆಹಲಿ: ಜೋ ಬೈಡನ್ ನೇತೃತ್ವದಲ್ಲಿ ಅಮೆರಿಕದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿನ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಮೊದಲ ಬಾರಿಗೆ 3 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ ಹಲವು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಭಾರತ-ಯುಎಸ್ ರಕ್ಷಣಾ ಪಾಲುದಾರಿಕೆಯನ್ನು ಎತ್ತರಕ್ಕೆ ಬೆಳೆಸುವುದು ಬೈಡನ್ ಆಡಳಿತದ ಆದ್ಯತೆಯಾಗಿದ್ದು, ಈ ಸಂದೇಶವನ್ನು ಅಮೆರಿಕ ಸರ್ಕಾರದಿಂದ ತಾವು ತಲುಪಿಸುತ್ತಿರುವುದಾಗಿ ಆಸ್ಟಿನ್ ಹೇಳಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಮುಕ್ತ ಹಾಗೂ ಸ್ವತ೦ತ್ರವಾದ ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಆಸ್ಟಿನ್ ವಿಶೇಷವಾಗಿ ಉಲ್ಲೇಖಿಸಿದ್ದು, ಭಾರತ-ಅಮೆರಿಕದ ನಡುವಿನ ಬಾಂಧವ್ಯವನ್ನು ಮುಕ್ತ ಹಾಗೂ ಸ್ವತ೦ತ್ರವಾದ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭದ್ರವಾದ ನೆಲೆ ಎಂದು ಬಣ್ಣಿಸಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಸೂತ್ರಗಳ ನಡುವೆಯೂ ಭಾರತ ಅಮೆರಿಕಾಗೆ ಅತ್ಯಂತ ಪ್ರಮುಖ ಪಾಲುದಾರಿಕೆ ರಾಷ್ಟ್ರವಾಗಿದ್ದು, ಅಮೆರಿಕ ಭಾರತದೊಂದಿಗೆ ಪ್ರಗತಿಪರ, ಮುನ್ನಡೆಯ ರಕ್ಷಣಾ ಪಾಲುದಾರಿಕೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇಂಡೋ-ಪೆಸಿಫಿಕ್ ಪ್ರದೇಶದೆಡೆಗೆ ಅಮೆರಿಕಗೆ ಇರುವ ಮಾರ್ಗಕ್ಕೆ ಭಾರತವೇ ಪ್ರಮುಖ ಕೇಂದ್ರ ಸ್ತಂಭ ಎಂದೂ ಆಸ್ಟಿನ್ ಬಣ್ಣಿಸಿದ್ದಾರೆ.
ರಕ್ಷಣಾ ಸಚಿವರೊಂದಿಗಿನ ಸಭೆಯಲ್ಲಿ ಆಸ್ಟಿನ್ ರಕ್ಷಣಾ ಪಾಲುದಾರಿಕೆಯಷ್ಟೇ ಅಲ್ಲದೇ ಮಾಹಿತಿ ಹಂಚಿಕೆ, ಲಾಜಿಸ್ಟಿಕ್ಸ್ ಸಹಕಾರ, ಕೃತಕ ಬುದ್ಧಿಮತ್ತೆ ಹಾಗೂ ಹೊಸ ಕ್ಷೇತ್ರಗಳಾದ ಬಾಹ್ಯಾಕಾಶ ಹಾಗೂ ಸೈಬರ್ ಗಳೆಡೆಗೆ ಭಾರತ-ಅಮೆರಿಕದ ಹೊಸ ಸಹಯೋಗದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ.
ಕ್ವಾಡ್ ಹಾಗೂ ಅಸೋಸಿಯೆಷನ್ ಅಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ASEAN) ವೇದಿಕೆಗಳಲ್ಲಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಭಾಗವಹಿಸುವಿಕೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಲಾಯ್ಡ್ ಆಸ್ಟಿನ್ ತಿಳಿಸಿದ್ದಾರೆ.