ಬ್ಯಾಂಕಾಕ್: ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್-ಒಚಾ ಅವರು ತಮಗೆ ಪ್ರಶ್ನೆಗಳನ್ನು ಕೇಳಲು ಮುಗಿದ್ದ ಪತ್ರಕರ್ತರ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ ಅವರನ್ನು ಕಂಗಾಲಾಗಿಸಿದ ಘಟನೆ ನಡೆದಿದೆ. ಸುದ್ದಿಗೋಷ್ಠು ನಡೆಸುತ್ತಿದ್ದ ಪ್ರಯುತ್ ಅವರಿಗೆ ಪತ್ರಕರ್ತ ಸತತವಾಗಿ ತೀಕ್ಷ್ಣ ಪ್ರಶ್ನೆಗಳು ತೂರಿಬಂದವು. ಈ ಪ್ರಶ್ನೆಗಳಿಂದ ಮುಜುಗರಕ್ಕೆ ಒಳಗಾದ ಅವರು, ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳಲು ಸ್ಯಾನಿಟೈಸರ್ ಸಿಂಪಡಿಸಿದ್ದಾರೆ.
ಖಾಲಿಯಾಗಿರುವ ಸಂಪುಟ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಯಾರು ಯಾರು ಇದ್ದಾರೆ ಎಂದು ಪಟ್ಟಿ ನೀಡುವಂತೆ ಅವರಿಗೆ ಸುದ್ದಿಗೋಷ್ಠಿಯಲ್ಲಿ ಕೇಳಲಾಯಿತು. ಅದರ ಬೆನ್ನಲ್ಲೇ ಏಳು ವರ್ಷದ ಹಿಂದೆ ಪ್ರತಿಭಟನೆ ವೇಳೆ ಬಂಡಾಯವೆದ್ದಿದ್ದ ಕಾರಣಕ್ಕೆ ಕಳೆದ ವಾರ ತಮ್ಮ ಮೂವರು ಸಚಿವರನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳಿದರು.
ವೇದಿಕೆಯ ಮುಂಭಾಗ ನಿಂತಿದ್ದ ಪ್ರಯುತ್, 'ಇನ್ನೂ ನೀವು ಕೇಳುವುದು ಏನಾದರೂ ಬಾಕಿ ಇದೆಯೇ? ನನಗೆ ಗೊತ್ತಿಲ್ಲ. ನಾನು ಅದನ್ನು ನೋಡಿಲ್ಲ. ಪ್ರಧಾನ ಮಂತ್ರಿಯೇ ಮೊದಲು ತಿಳಿಯಬೇಕು ಎನ್ನುವುದೇನಾದರೂ ಇದೆಯೇ?' ಎಂದು ಪತ್ರಕರ್ತರನ್ನು ಕೇಳಿದರು. ಬಳಿಕ ಸ್ಯಾನಿಟೈಸರ್ ಬಾಟಲಿ ತೆಗೆದುಕೊಂಡು ಮುಂದಿನ ಸಾಲಿನ ಪತ್ರಕರ್ತರ ಮೇಲೆ ಸಿಂಪಡಿಸುತ್ತಾ ಸಾಗಿದರು.
ಪತ್ರಕರ್ತರ ಕಡೆಗೆ ಸಹಜವಾಗಿಯೇ ನಡೆದುಕೊಂಡು ಬಂದ ಪ್ರಯುತ್, ತಮ್ಮ ಮುಖಕ್ಕೆ ಸರ್ಜಿಕಲ್ ಮಾಸ್ಕ್ ಅನ್ನು ಅಡ್ಡಲಾಗಿ ಹಿಡಿದುಕೊಂಡು ಪತ್ರಕರ್ತ ಸಾಲಿನ ಮೇಲೆ ಸ್ಯಾನಿಟೈಸರ್ ಸಿಂಪಡಿಸುತ್ತಾ ನಡೆದಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಬಳಿಕ ತಮ್ಮ ವಿರುದ್ಧ ಆಕ್ರೋಶಗೊಂಡಿದ್ದ ಪತ್ರಕರ್ತರ ಜತೆಗೆ ಅವರು ಮಾತನಾಡುವುದು ಕೂಡ ಸೆರೆಯಾಗಿದೆ. ನಂತರವೂ ಅವರ ಮೇಲೆ ಹ್ಯಾಂಡ್ ಸ್ಯಾನಿಟೈಸರ್ ಚಿಮುಕಿಸಿ, ತಮ್ಮ ಕೈಗಳನ್ನು ಆಡಿಸುತ್ತಾ ತೆರಳಿದ್ದಾರೆ.
ಪ್ರಯುತ್ ಅವರ ವರ್ತನೆಗೆ ವಿಭಿನ್ನ ಬಗೆಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ, ಈ ರೀತಿ ಕೀಳುಮಟ್ಟದಲ್ಲಿ ಅಸಹನೆ ಹೊರಹಾಕುವುದು ಆ ಹುದ್ದೆಗೆ ಮಾಡುವ ಅಪಚಾರ ಎಂದು ಟೀಕಿಸಲಾಗಿದೆ.