ಕಾಸರಗೋಡು: ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಪ್ರಗತಿಗೆ ಬಲಿಷ್ಠ ಸಂಘಟನೆ ಅಗತ್ಯವೆಂದು ರಾಮಕ್ಷತ್ರಿಯ ಸಂಘ ಮಂಗಳೂರು ಇದರ ಅಧ್ಯಕ್ಷ ಕೆ.ರವೀಂದ್ರ ಅವರು ಹೇಳಿದರು.
ಅಣಂಗೂರು ಶ್ರೀ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಅಣಂಗೂರು ಉಪಸಂಘ ಮತ್ತು ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದ ಅಣಂಗೂರು ಇದರ ದಶಮಾನೋತ್ಸವ ಮತ್ತು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಒತ್ತು ಕೊಡುವ ಜೊತೆಯಲ್ಲಿ ಸ್ವೋದ್ಯೋಗಕ್ಕೆ ತಯಾರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಒಲವು ತೋರಬೇಕು. ಪಠ್ಯೇತರ ಚಟುವಟಿಕೆಯಲ್ಲೂ ಮುಂದೆ ಬರಬೇಕಾಗಿದ್ದು, ದುಶ್ಚಟಗಳಿಂದ ದೂರವಿರಬೇಕೆಂದು ಅವರು ಕರೆ ನೀಡಿದರು.
ಪುಟಾಣಿಗಳಿಗೆ ಚಿಕ್ಕಂದಿನಲ್ಲೇ ಸಂಸ್ಕøತಿಯ ಮೌಲ್ಯವನ್ನು ತಿಳಿಸಕೊಡಬೇಕು. ಈ ಬಗೆಗಿನ ನಿರ್ದೇಶನಗಳು ಮನೆಯಿಂದಲೇ ನಡೆಯಬೇಕು. ಮನೆ ಮನೆಯಲ್ಲೂ ಭಜನೆಯಿಂದ ಸಕಾರಾತ್ಮಕ ಶಕ್ತಿ, ಚಿಂತನೆ ಮೂಡುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಶುಭಾ ಪ್ರಶಾಂತ್ ಹೇಳಿದರು.
ಅಣಂಗೂರು ಉಪಸಂಘದ ಅಧ್ಯಕ್ಷ ಕೆ.ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಲಂದಾ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ಕೀಕಾನ ಅಧ್ಯಕ್ಷ ಕೆ.ನಿರಂಜನ ಕೊರಕೋಡು ಉಪಸ್ಥಿತರಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಬಿ.ಪಿ, ಜಿಲ್ಲಾ ಮಹಿಳಾ ಸಂಘ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಜಿಲ್ಲಾ ಸಂಘದ ಕಾರ್ಯದರ್ಶಿ ಲೊಕೇಶ್ ಕುಮಾರ್, ಲಕ್ಷ್ಮಣಾನಂದ ಸ್ವಸಹಾಯ ಸಂಘ ಅಧ್ಯಕ್ಷ ವಿಠಲ ನುಳ್ಳಿಪಾಡಿ, ಲಕ್ಷ್ಮಣಾನಂದ ಸರಸ್ವತಿ ಮಹಿಳಾ ವೃಂದ ಅಧ್ಯಕ್ಷೆ ಉಷಾ ನವೀನ್‍ಚಂದ್ರ ಉಪಸ್ಥಿತರಿದ್ದರು.
ಅಣಂಗೂರು ಉಪಸಂಘದ ಸದಸ್ಯ ಜೋಗೇಂದ್ರನಾಥ್ ಸ್ವಾಗತಿಸಿ, ಬಬಿತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣಾನಂದ ಸ್ವಸಹಾಯ ಸಂಘದ ಸದಸ್ಯ ಬಿ.ವೆಂಕಟೇಶ್ ವಂದಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.