ನವದೆಹಲಿ: ಡಿಜಿಟಲ್ ಸುದ್ದಿ ನಿಯಮಾವಳಿಗಳಿಂದ ದಿನಪತ್ರಿಕೆಗಳ ವೆಬ್‌ಸೈಟ್‌ಗಳಿಗೆ ವಿನಾಯಿತಿ ನೀಡುವಂತೆ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಐಎನ್‌ಎಸ್ 800 ದಿನಪತ್ರಿಕೆಗಳು, ನಿಯತಕಾಲಿಕೆಗಳ ಸಮೂಹವನ್ನು ಒಳ ಗೊಂಡಿದೆ. ಡಿಜಿಟಲ್ ಸುದ್ದಿ ಸೇರಿದಂತೆ ಮಾಧ್ಯಮಗಳಿಗೆ ಸಮಾನಂತರ ವೇದಿಕೆ ರೂಪಿಸುವ ಸರ್ಕಾರದ ಪ್ರಯತ್ನವನ್ನು ಐಎನ್‌ಎಸ್ ಸ್ವಾಗತಿಸಿದೆ.
'ಪ್ರತಿ ದಿನವೂ ಸುದ್ದಿಗಳ ನಿಖರತೆ, ಸತ್ಯಾಸತ್ಯತೆ ಅರಿಯುವುದು ಮತ್ತು ಪರಿಶೀಲಿಸಲು ರೂಪಿಸಿರುವ ವ್ಯವಸ್ಥೆಯಿಂದಾಗಿ ದಿನಪತ್ರಿಕೆಗಳು ಅತಿ ಹೆಚ್ಚು ಜವಾಬ್ದಾರಿ ಮತ್ತು ವಿಶ್ವಾಸಾರ್ಹತೆ ಹೊಂದಿವೆ. ನಮ್ಮ ದಿನಪತ್ರಿಕೆಗಳ ಡಿಜಿಟಲ್ ವೆಬ್‌ಸೈಟ್‌ಗಳು ಸಹ ಇದೇ ನಿಯಮಾವಳಿಗಳನ್ನು ಅನುಸರಿಸುತ್ತಿವೆ. ಹೀಗಾಗಿ, ಪ್ರಕಾಶಕರ ವೆಬ್‌ಸೈಟ್‌ಗಳಿಗೆ ಹೊಸ ಡಿಜಿಟಲ್ ಸುದ್ದಿ ನಿಯಮಾವಳಿಗಳಿಂದ ವಿನಾಯಿತಿ ನೀಡಬೇಕು ಮತ್ತು ದಿನಪತ್ರಿಕೆಗಳು ಈಗ ಅನುಸರಿಸುತ್ತಿರುವ ಸ್ವಯಂ ನಿಯಂತ್ರಣ ನಿಯಮಾವಳಿಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕು' ಎಂದು ಐಎನ್‌ಎಸ್ ಅಧ್ಯಕ್ಷ ಎಲ್. ಆದಿಮೂಲಂ ಕೋರಿದ್ದಾರೆ.
ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಆದಿಮೂಲಂ ಅವರು ಪತ್ರ ಬರೆದಿದ್ದಾರೆ.
'ಪ್ರಕಾಶಕರ ವೆಬ್‌ಸೈಟ್‌ಗಳು ದಿನ ಪತ್ರಿಕೆಗಳ ವಿಸ್ತೃತರೂಪವಾಗಿವೆ. ಈಗಿರುವ ಅದೇ ಸುದ್ದಿ ಮನೆಯಿಂದಲೇ ಸುದ್ದಿಯನ್ನು ಸಿದ್ಧಪಡಿಸಲಾಗುತ್ತದೆ. ಸುದ್ದಿಗಳನ್ನು ಖಚಿತತೆಗಾಗಿ ನಿರಂತರ ಪರಿಶೀಲನೆಗೆ ಒಳಪಡಿಸಿ ಸಂಪಾದಕೀಯ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ. ಏಕೆಂದರೆ ವಿಶ್ವಾಸಾರ್ಹತೆಯೇ ಮುಖ್ಯ ಮತ್ತು ಶ್ರೇಷ್ಠ. ದಿನಪತ್ರಿಕೆಗಳ ವೆಬ್‌ಸೈಟ್‌ಗಳಲ್ಲಿನ ಸುದ್ದಿಗಳು ಸಹ ಮುದ್ರಣ ಆವೃತ್ತಿಯ ರೀತಿಯಲ್ಲೇ ಸಂಪಾದಕೀಯ ಪರಿಶೀಲನೆಗೆ ಒಳಪಡುತ್ತವೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಮುದ್ರಣ ಅಥವಾ ಟಿ.ವಿ. ಚಾನಲ್‌ಗಳ ವಿಸ್ತರಣೆಯನ್ನು ರೂಪಿಸಿಕೊಂಡಿರುವ ಡಿಜಿಟಲ್ ಸುದ್ದಿ ಪ್ರಕಾಶಕರು, ಈಗಾಗಲೇ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ ಮತ್ತು ಹಲವಾರು ನಿಯಮಾವಳಿಗಳಿಗೆ, ನೀತಿ ಸಂಹಿತೆಗಳಿಗೆ ಹಾಗೂ ಈ ನೆಲದ ಕಾನೂನುಗಳಿಗೆ ಉತ್ತರದಾಯಿತ್ವ ಹೊಂದಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ದಿನಪತ್ರಿಕೆಗಳು ಅನುಸರಿಸುತ್ತಿರುವಂತೆಯೇ ದಿನಪತ್ರಿಕೆಗಳ ವೆಬ್‌ಸೈಟ್‌ಗಳು ಸ್ವಯಂ ನಿಯಂತ್ರಣ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕು ಎಂದು ಐಎನ್‌ಎಸ್ ಪ್ರಸ್ತಾವ ಸಲ್ಲಿಸುತ್ತದೆ. ಏಕೆಂದರೆ ಈ ವೆಬ್‌ಸೈಟ್‌ಗಳು ಎಲ್ಲ ದೃಷ್ಟಿಕೋನದಿಂದಲೂ ದಿನಪತ್ರಿಕೆಗಳ ವಿಸ್ತರಣೆಯ ಭಾಗವಾಗಿವೆ. ಕೇವಲ ಪ್ರಕಟಿಸುವ ಅವಧಿಯಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ. ದಿನಪತ್ರಿಕೆಗಳು ಕಠಿಣ ಸ್ವಯಂ ನಿಯಂತ್ರಣ ನಿಯಮಾವಳಿಗಳನ್ನು ಅನುಸರಿಸುತ್ತವೆ. ಜತೆಗೆ, ಭಾರತೀಯ ಪತ್ರಿಕಾ ಮಂಡಳಿಯು ಪತ್ರಕರ್ತರಿಗೆ ರೂಪಿಸಿರುವ ನಡವಳಿಕೆಗಳಿಗೆ ಬದ್ಧವಾಗಿವೆ. ಆದ್ದರಿಂದ, ಇವರಿಗೆ ಇನ್ನೊಂದು ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
'ಹೊಸ ಡಿಜಿಟಲ್ ನಿಯಮಾವಳಿಗಳಿಗೆ ತಕ್ಷಣವೇ ತಿದ್ದುಪಡಿ ಮಾಡಬೇಕು. ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ (ಪಿಆರ್‌ಬಿ) ಕಾಯ್ದೆ ಅಡಿಯಲ್ಲಿ ಆರ್‌ಎನ್‌ಐನಲ್ಲಿ ನೋಂದಣಿಯಾಗಿರುವ ದಿನಪತ್ರಿಕೆಗಳ ವೆಬ್‌ಸೈಟ್‌ಗಳು ಮತ್ತು ನಿಯತಕಾಲಿಕೆಗಳಿಗೆ ಈ ನಿಯಮಾವಳಿಗಳಿಂದ ವಿನಾಯಿತಿ ನೀಡಬೇಕು' ಎಂದು ಅವರು
ಕೋರಿದ್ದಾರೆ.
'ಪ್ರಕಾಶಕರು ಅತ್ಯುನ್ನತ ಪತ್ರಿಕಾ ಮೌಲ್ಯಗಳನ್ನು ಪಾಲಿಸುತ್ತಿದ್ದಾರೆ. ಆದ್ದರಿಂದ, ಸಾಮಾಜಿಕ ಮಾಧ್ಯಮಗಳು ಮತ್ತು ಒಟಿಟಿಗಳ ಜತೆಯಲ್ಲಿ ಸುದ್ದಿ ವೆಬ್‌ಸೈಟ್‌ಗಳನ್ನು ಸೇರಿಸಬಾರದು' ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.