ಚೆನ್ನೈ : ತಮಿಳುನಾಡಿನ ಮೈಲಾದುತುರೈ,ತಿರುವರೂರ ಮತ್ತು ಕಾರೈಕಲ್ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಶನಿವಾರ ವಿಲಕ್ಷಣ ಶಬ್ದ ಮತ್ತು ಭೂಕಂಪ ಸದೃಶ ದೃಶ್ಯಗಳು ಜನರನ್ನು ಭಯಭ್ರಾಂತಗೊಳಿಸಿದ್ದವು.
ಭೀತಿಗೊಳಗಾಗಿದ್ದ ಜನರು ಮನೆಗಳಿಂದ ಹೊರಗೆ ಧಾವಿಸಿ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಮೈಲಾದುತುರೈ ಬಳಿಯ ಕೋವಂಗುಡಿ ಮತ್ತು ಮರೈಯೂರ್ ಗ್ರಾಮಗಳಲ್ಲಿ ಶಬ್ದ ಕೇಳಿಸಿದಾಗ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ಭಾರತೀಯ ವಾಯಪಡೆಯ ವಿಮಾನವೊಂದು ಪ್ರದೇಶದಲ್ಲಿ ಗೋಚರಿಸಿದ್ದು ಭೀತಿ ಮತ್ತು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿತ್ತು.
ಬೆಳಿಗ್ಗೆ 8:45ರ ಸುಮಾರಿಗೆ ವಿಲಕ್ಷಣ ಶಬ್ದ ಕೇಳಿಬಂದಿದ್ದು,ಇದರ ಬೆನ್ನಲ್ಲೇ ಹೆಚ್ಚಿನ ಸ್ಥಳಗಳಲ್ಲಿ ಜನರಿಗೆ ಭೂಮಿ ತಲ್ಲಣಿಸಿದ್ದ ಅನುಭವವಾಗಿತ್ತು. ಕೆರೆಗಳು ಮತ್ತು ನದಿಗಳಲ್ಲಿಯ ನೀರಿನ ಮಟ್ಟ ಕಾರಂಜಿಯಂತೆ ಕೆಲವು ಮೀಟರ್‌ಗಳಷ್ಟು ಎತ್ತರಕ್ಕೆ ಚಿಮ್ಮಿತ್ತು ಎನ್ನಲಾಗಿದೆ.
ಈ ವಿಚಿತ್ರ ಘಟನೆಯ ಬಗ್ಗೆ ಪೊಲೀಸರು,ಕಂದಾಯ ಇಲಾಖೆ,ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳಿಗೆ ಮಾಹಿತಿ ನೀಡಿದ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವಿಚಿತ್ರ ಶಬ್ದದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ಎಲ್ಲ ಘಟನಾವಳಿಗಳಿಗೆ ನಿಖರ ಕಾರಣ ಗೊತ್ತಾಗಿಲ್ಲ.
ಶಬ್ದವು ವಿಮಾನದಿಂದ ಹೊರಹೊಮ್ಮಿರಬಹುದು ಮತ್ತು ಭೂಕಂಪ ಸಂಭವಿಸಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕಂದಾಯಾಧಿಕಾರಿಗಳು ಹೇಳಿದ್ದಾರೆ.
ಆದರೆ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.