ಕಾಸರಗೋಡು: ಕೋವಿಡ್ ಆರ್‍ಟಿಪಿಸಿಆರ್ ಪರಿಶೋಧನೆಗಾಗಿ ಜಿಲ್ಲೆಗೆ ಸುಸಜ್ಜಿತ ಮೊಬೈಲ್ ಯೂನಿಟ್ ಲಭ್ಯವಾಗಿದ್ದು, ಮಾ 15ರಂದು ತಲುಪಲಿದೆ. 2ಸಾವಿರ ಮಂದಿಯ ಕೋವಿಡ್ ಆರ್‍ಟಿಪಿಸಿಆರ್ ತಪಾಸಣೆ ನಡೆಸುವ ಸಾಮಥ್ರ್ಯಹೊಂದಿರುವ ಯೂನಿಟ್ 20ರಿಂದ ತಪಾಸಣೆ ಆರಂಭಿಸಲಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆ ಕೇಂದ್ರೀಕರಿಸಿ ಮೊಬೈಲ್ ಯೂನಿಟ್ ಚಟುವಟಿಕೆ ನಡೆಸಲಿದ್ದು, ಪ್ರತಿ ದಿನ ಎರಡು ಸಾವಿರ ಮಂದಿಗೆ ಈ ಯೂನಿಟ್ ಮೂಲಕ ಉಚಿತ ತಪಾಸಣೆ ಸಾಧ್ಯವಾಗಲಿದೆ. ವಿಮಾನ ನಿಲ್ದಾಣ ಹೊಂದಿರುವ ಜಿಲ್ಲೆಗಳಿಗೆ ಮಾತ್ರ ಇಂತಹ ಯೂನಿಟ್ ಮಂಜೂರುಗೊಳಿಸಲಾಗುತ್ತಿದ್ದರೂ, ಕೇರಳ-ಕರ್ನಾಟಕ ಗಡಿ ಜಿಲ್ಲೆಯಾಗಿರುವುದರಿಂದ ಮೊಬೈಲ್ ಯೂನಿಟ್ ಮಂಜೂರುಗೊಳಿಸುವ ಬಗ್ಗೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಕಾಸರಗೋಡಿಗೂ ಯೂನಿಟ್ ಲಭ್ಯವಾಗಿದೆ.
ಕೋವಿಡ್ ಶಂಕಿತರ ರಕ್ತ ತೆಗೆದು, ತಪಾಸಣೆ ನಡೆಸಿ ತಾಸುಗಳೊಳಗೆ ಫಲಿತಾಂಶ ನೀಡಲು ಸಹಾಯವಾಗಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಣೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಮೊಬೈಲ್ ಯೂನಿಟ್ ತಪಾಸಣೆ ಆರಂಭಿಸಲಾಗಿದೆ.