ನವದೆಹಲಿ: "ಕೊರೊನಾ ಸೋಂಕಿನ ವಿರುದ್ಧ ಇಂದು ಲಸಿಕೆ ಪಡೆದುಕೊಂಡೆ. ಲಸಿಕೆ ನೀಡಿದ ನರ್ಸ್ ರಮ್ಯಾ ಅವರ ಕಾಳಜಿ ಹಾಗೂ ವೃತ್ತಿಪರತೆಗೆ ಧನ್ಯವಾದ ಹೇಳಿದೆ. ಈ ಸಂದರ್ಭ ನನಗೆ ಅನ್ನಿಸಿದ್ದು ಒಂದೇ. ಭಾರತದಲ್ಲಿರುವುದು ನನ್ನ ಅದೃಷ್ಟ ಎಂದು..." ಕೊರೊನಾ ಲಸಿಕೆ ಪಡೆದುಕೊಂಡ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೀಗೆ ಟ್ವೀಟ್ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ದೆಹಲಿಯ ವಸಂತ್ ಕುಂಜ್‌ನಲ್ಲಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರು.
ಆನಂತರ ತಮ್ಮ ಅನುಭವ ವಿವರಿಸಿ ಟ್ವೀಟ್ ಮಾಡಿರುವ ಅವರು, "ಪ್ರಾಮಾಣಿಕ ಹಾಗೂ ಕೈಗೆಟುಕುವ ಅಭಿವೃದ್ಧಿ ಕಾರ್ಯಗಳನ್ನು ಸಾಧ್ಯವಾಗಿಸಿದ ದೇಶ ಭಾರತ. ಈ ಭಾರತದಲ್ಲಿರುವುದು ನನ್ನ ಅದೃಷ್ಟ" ಎಂದು ಬರೆದುಕೊಂಡಿದ್ದಾರೆ.
ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಲ್‌ಎನ್ ಜೆಪಿ ಆಸ್ಪತ್ರೆಯಲ್ಲಿ ತಮ್ಮ ಪೋಷಕರೊಂದಿಗೆ ಬಂದು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದುಕೊಳ್ಳುವಂತೆ ಜನರಿಗೂ ಮನವಿ ಮಾಡಿದ್ದಾರೆ.
ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಮಾರ್ಚ್ 1ರಿಂದ ಎರಡನೇ ಹಂತದ ಲಸಿಕಾ ಅಭಿಯಾನ ಆರಂಭಗೊಂಡಿದೆ. ಈ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಬಿಜೆಪಿಯ ಹಲವು ಮುಖಂಡರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.