ನವದೆಹಲಿ : ಈಚೆಗೆ ಉತ್ತರ ಪ್ರದೇಶದಲ್ಲಿ ರೈಲು ಪ್ರಯಾಣದ ವೇಳೆ ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಮುತ್ತಿಗೆ ಹಾಕಿ ಅವರನ್ನು ರೈಲಿನಿಂದ ಇಳಿಸಿರುವ ಆರೋಪ ಸುಳ್ಳು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.
"ಉತ್ತರ ಪ್ರದೇಶದಲ್ಲಿ ಯಾವುದೇ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ ನಡೆಸಿಲ್ಲ. ಕೇರಳ ಮುಖ್ಯಮಂತ್ರಿ ಈ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ದೂರಿದ್ದಾರೆ.
ಮಾರ್ಚ್ 19ರಂದು ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರ ಇಬ್ಬರು ಶಿಷ್ಯೆಯರ ಮೇಲೆ ಮುತ್ತಿಗೆ ಹಾಕಿದ್ದ ಆರೋಪ ಕೇಳಿಬಂದಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಈ ವಿಷಯವನ್ನು ಎತ್ತಿ ಹಿಡಿದು, ಗೃಹ ಸಚಿವರಿಗೆ ಪತ್ರವನ್ನೂ ಬರೆದಿದ್ದರು. ಅಮಿತ್ ಶಾ ಅವರು ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.
ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ದೂರು ಕೇಳಿಬಂದ ನಂತರ ಅಲ್ಲಿನ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ. ಆ ದೂರು ಸರಿಯಿದೆಯೇ ಎಂಬುದನ್ನು ಪರಿಶೀಲಿಸುವುದು ಪೊಲೀಸರ ಕರ್ತವ್ಯ. ಪೊಲೀಸರು ವಿಚಾರಣೆ ನಡೆಸಿ ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಅವರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತೀವ್ರ ವಿವಾದ ಸೃಷ್ಟಿಸಿತ್ತು. ಮಾರ್ಚ್ 19ರಂದು ಹರಿದ್ವಾರ- ಪುರಿ ಉತ್ಕಲ್ ಎಕ್ಸ್‌ಪ್ರೆಸ್‌ನಲ್ಲಿ ಸನ್ಯಾಸಿನಿಯರು ಪ್ರಯಾಣಿಸುತ್ತಿದ್ದರು. ರೈಲ್ವೆ ಬೋಗಿಯಲ್ಲಿ ಕೆಲವು ವ್ಯಕ್ತಿಗಳು ನಾಲ್ವರು ಮಹಿಳೆಯರನ್ನು ಸುತ್ತುವರಿದಿರುವುದು 25 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿತ್ತು.