ಮುಂಬೈ: ಮುಂಬೈನ ಪ್ರಸಿದ್ಧ ಕರಾಚಿ ಬೇಕರಿ ಉದ್ಯಮದಲ್ಲಿನ ನಷ್ಟಗಳಿಂದಾಗಿ ಇತ್ತೀಚಿಗೆ ಮುಚ್ಚುಗಡೆಯಾಗಿದೆ. ಕಳೆದ ವರ್ಷ 'ಪಾಕಿಸ್ತಾನಿ ಹೆಸರು' ಇಟ್ಟುಕೊಂಡಿದ್ದಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸಮಿತಿ (ಎಂಎನ್‌ಎಸ್) ಮತ್ತು ಶಿವಸೇನೆ ಟೀಕೆಗಳಿಗೆ ಗುರಿಯಾಗಿದ್ದ ಈ ಬೇಕರಿ ವಿವಾದದಲ್ಲಿ ಸಿಲುಕಿಕೊಂಡಿತ್ತು.
'ಹಳೆಯ ಲೀಸ್ ಒಪ್ಪಂದ ಮುಗಿದ ಬಳಿಕ ನಾವು ಬೇಕರಿಯನ್ನು ಮುಚ್ಚಿದ್ದೇವೆ. ಕಟ್ಟಡದ ಮಾಲಿಕರು ಹೆಚ್ಚಿನ ಬಾಡಿಗೆಯನ್ನು ಕೇಳುತ್ತಿದ್ದು, ಅದು ನಮ್ಮಿಂದ ಸಾಧ್ಯವಿಲ್ಲ. ಲಾಕ್‌ಡೌನ್‌ನಿಂದಾಗಿ ಈಗಾಗಲೇ ವ್ಯವಹಾರವೂ ಕಡಿಮೆಯಾಗಿದೆ 'ಎಂದು ಬೇಕರಿಯ ಮ್ಯಾನೇಜರ್ ರಾಮೇಶ್ವರ ವಾಘ್ಮಾರೆ ಅವರು ಸುದ್ದಿಗಾರರಿಗೆ ತಿಳಿಸಿದರು.
ಆದರೆ ತನ್ನಿಂದಾಗಿ ಬೇಕರಿ ಮುಚ್ಚಿದೆ ಎಂದು ಎಂಎನ್‌ಎಸ್ ಹೇಳಿಕೊಂಡಿದೆ. ತನ್ನ ಹೆಸರಿನಿಂದಾಗಿ ಭಾರೀ ಪ್ರತಿಭಟನೆಯನ್ನು ಎದುರಿಸಿದ್ದ ಕರಾಚಿ ಬೇಕರಿ ಕೊನೆಗೂ ಮುಂಬೈನಲ್ಲಿಯ ತನ್ನ ಏಕೈಕ ಮಳಿಗೆಯನ್ನು ಮುಚ್ಚಿದೆ ಎಂದು ಎಂಎನ್‌ಎಸ್ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ ಟ್ವೀಟಿಸಿದ್ದರು.
ಬೇಕರಿಯನ್ನು ಮುಚ್ಚುವ ನಿರ್ಧಾರ ವ್ಯಾವಹಾರಿಕ ಅಂಶಗಳನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಿದ ವಾಘ್ಮಾರೆ,'ನಮ್ಮ ಹೆಸರನ್ನು ಬದಲಿಸಿ ಶರಣಾಗಲು ಯಾವುದೇ ಕಾರಣವಿರಲಿಲ್ಲ. ಎಲ್ಲ ಪರವಾನಿಗೆಗಳು ಮತ್ತು ಅನುಮತಿಗಳೊಂದಿಗೆ ಬೇಕರಿ ಶಾಸನಬದ್ಧ ಉದ್ಯಮವಾಗಿತ್ತು. ವ್ಯಾವಹಾರಿಕ ಅಂಶಗಳನ್ನು ಪರಿಗಣಿಸಿ ಬೇಕರಿಯನ್ನು ಮುಚ್ಚಲಾಗಿದೆ. ಬೇಕರಿ ಮುಚ್ಚಿಸಿದ ಹೆಗ್ಗಳಿಕೆಯನ್ನು ಯಾರು ಬೇಕಾದರೂ ಪಡೆದುಕೊಳ್ಳಲಿ,ಬಿಡಿ'ಎಂದು ಹೇಳಿದರು.
ಹೊಸ ಜಾಗವನ್ನು ಬಾಡಿಗೆಗೆ ಪಡೆಯಬೇಕೇ ಅಥವಾ ಮುಂಬೈನಲ್ಲಿ ಬ್ರಾಂಡ್ ಅಳಿಯಲು ಅವಕಾಶ ನೀಡಬೇಕೇ ಎನ್ನುವುದನ್ನು ಮಾಲಿಕರು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು. ಬೇಕರಿಯಿದ್ದ ಜಾಗದಲ್ಲಿ ಈಗ ಐಸ್‌ಕ್ರೀಂ ಪಾರ್ಲರೊಂದು ತಲೆಯೆತ್ತಿದೆ.
ಕರಾಚಿ ಬೇಕರಿಯು ಪಾಕಿಸ್ತಾನದಿಂದ ವಲಸೆ ಬಂದಿದ್ದ ಸಿಂಧಿ ಹಿಂದು ಕುಟುಂಬ ರಮಾಣಿಯಾಗಳು ನಡೆಸುತ್ತಿರುವ ಹೈದರಾಬಾದ್ ಮೂಲದ ಸರಣಿ ಬೇಕರಿಗಳ ಭಾಗವಾಗಿದ್ದು,ಈ ಸಮೂಹವು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ.
ಕಳೆದ ನವೆಂಬರ್‌ನಲ್ಲಿ ಕರಾಚಿ ಬೇಕರಿಯ ಸಿಬ್ಬಂದಿಗಳಿಗೆ ಕಿರುಕುಳ ನೀಡಿದ್ದ ಶೇಖ್ ಮತ್ತು ಬೆಂಬಲಿಗರು 'ದೇಶವಿರೋಧಿ' ಮತ್ತು 'ದೇಶಭಕ್ತಿರಹಿತ'ವಾಗಿರುವ ಹೆಸರನ್ನು ಬದಲಿಸುವಂತೆ ಮಾಲಿಕರನ್ನು ಆಗ್ರಹಿಸಿದ್ದರು. ಶೇಖ್ ಕರಾಚಿ ಬೇಕರಿಗೆ ಕಾನೂನು ನೋಟಿಸನ್ನೂ ನೀಡಿದ್ದರು. ಅದೇ ತಿಂಗಳು ಶಿವಸೇನೆಯ ಸ್ಥಳೀಯ ನಾಯಕ ನಿತಿನ್ ನಂದಗಾಂವಕರ್ ಬೇಕರಿಯ ಹೆಸರನ್ನು ಬದಲಿಸುವಂತೆ ಮತ್ತು ಮರಾಠಿ ಹೆಸರನ್ನಿಡುವಂತೆ ಮಾಲಿಕರಿಗೆ ಬೆದರಿಕೆಯನ್ನೊಡ್ಡಿದ್ದರು. ಆದರೆ ಶಿವಸೇನೆಯ ಹಿರಿಯ ನಾಯಕ ಸಂಜಯ ರಾವುತ್ ಅವರು ಇದು ಪಕ್ಷದ ಅಧಿಕೃತ ಬೇಡಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದರು. ನಂದಗಾಂವಕರ್ ಭೇಟಿಯ ಬಳಿಕ ಬೇಕರಿಯು ತನ್ನ ಹೆಸರನ್ನು ವೃತ್ತಪತ್ರಿಕೆಯಿಂದ ಮರೆಮಾಡಿದ್ದು ವರದಿಯಾಗಿತ್ತು.