ನವದೆಹಲಿ: ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಉಂಟಾಗಿರುವ ರಾಜಕೀಯ ವಿಪ್ಲವದಿಂದಾಗಿ ಉದ್ದಿನ ಬೇಳೆಯ ಆಮದು ಮೇಲೆ ಪರಿಣಾಮ ಬೀರಲಿದ್ದು, ಈ ವರ್ಷ ಆಹಾರ ಪ್ರಿಯರಿಗೆ ಇಷ್ಟವಾಗ ಇಡ್ಲಿ ಮತ್ತು ದೋಸೆಯ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಖಾರೀಫ್ ಸೀಸನ್ನಲ್ಲಿ ಸುರಿದ ಅಕಾಲಿಕ ಮಳೆಯು ದೇಶಿಯ ಉದ್ದಿನ ಬೇಳೆ ಉತ್ಪಾದನೆ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಉಂಟಾಗಿದ್ದ ಕೊರತೆಯನ್ನು ನೀಗಿಸಲು 2021-22ನೇ ಸಾಲಿನಲ್ಲಿ ಸುಮಾರು 4 ಲಕ್ಷ ಟನ್ ಉದ್ದಿನ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಕಳೆದ ವಾರ ಅನುಮತಿ ನೀಡಿತ್ತು.
ಉದ್ದಿನ ಬೇಳೆಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್ ಇದೆ. ಅತಿ ಹೆಚ್ಚಾಗಿ ಎಲ್ಲರಿಗೂ ಪ್ರಿಯವಾದ ಇಡ್ಲಿ, ದೋಸೆ, ಪಪ್ಪಾಡ್ ಸೇರಿದಂತೆ ಅನೇಕ ಖಾರದ ಭಕ್ಷ್ಯಗಳನ್ನು ತಯಾರಿಸಲು ಉದ್ದಿನ ಬೇಳೆ ತುಂಬಾ ಅವಶ್ಯಕ. ಹೀಗಾಗಿ ಆಮದು ಮೇಲೆ ಪರಿಣಾಮ ಬೀರಿರುವುದರಿಂದ ಸಹಜವಾಗಿಯೇ ಈ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯರಿಗೆ ಇದರ ಪರಿಣಾಮ ಹೆಚ್ಚಾಗಿ ಬೀರಲಿದೆ.
ಭಾರತೀಯ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಸಂಘದ (ಐಪಿಜಿಎ) ಉಪಾಧ್ಯಕ್ಷ ಬಿಮಲ್ ಕೊಠಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ಆಮದು ಕೋಟಾ ನಿರೀಕ್ಷಿತ ಸಾಲಿನಲ್ಲಿದೆ. ಆದಾಗ್ಯು ಮ್ಯಾನ್ಮಾರ್‌ನಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಅಶಾಂತಿಯಿಂದಾಗಿ ಸಾಗಾಟ ಸುಲಭವಲ್ಲ. ಖಂಡಿತವಾಗಿ ಈ ವರ್ಷ ಆಮದಿನಲ್ಲಿ ಕೆಲವೊಂದು ಅಡೆತಡೆಗಳನ್ನು ಎದುರಿಸಬೇಕಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಅಶಾಂತಿಯು ಈಗಾಗಲೇ ಮ್ಯಾನ್ಮಾರ್‌ನಲ್ಲಿ ದ್ವಿದಳ ಧಾನ್ಯಗಳ ಸರಬರಾಜು ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದೆ. ಭಾರತವನ್ನು ಬಿಟ್ಟರೆ, ಧಾನ್ಯಗಳ ಉತ್ಪಾದನೆಯಲ್ಲಿ ಮ್ಯಾನ್ಮಾರ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಮ್ಯಾನ್ಮಾರ್‌ನಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯಿಂದಾಗಿ ಹಡಗುಗಳು ಚಲಿಸಲು ಸಾಧ್ಯವಿಲ್ಲದ ಕಾರಣ ಸರಕುಗಳು ಸಿಲುಕಿಕೊಂಡಿವೆ ಎಂದು ಸರಕು ದಲ್ಲಾಳಿಗಳು ಮತ್ತು ವ್ಯಾಪಾರಿಗಳಲ್ಲಿ ಒಬ್ಬರು ಮಾಹಿತಿ ನೀಡಿದ್ದಾರೆ.
ಭಾರತದ ಉದ್ದಿನ ಬೇಳೆ ಬಳಕೆ 2.2 ರಿಂದ 3.0 ಮಿಲಿಯನ್ ಟನ್ಗಳಷ್ಟು ಕುಸಿಯಲಿದೆ ಎಂದು ವ್ಯಾಪಾರ ಅಂದಾಜುಗಳು ಬಹಿರಂಗಪಡಿಸಿವೆ. ಉದ್ದಿನ ಬೇಳೆಯು ಭಾರತದಲ್ಲಿ ವ್ಯಾಪಕವಾಗಿ ಸೇವಿಸುವ ಮೂರನೇ ದ್ವಿದಳ ಧಾನ್ಯವಾಗಿದೆ. ಕಡಲೆ ಮತ್ತು ಬೇಳೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.
2017-18ರಲ್ಲಿ ಭಾರತವು ದಾಖಲೆಯ 3.49 ಮಿಲಿಯನ್ ಟನ್ ಉದ್ದಿನ ಬೇಳೆ ಉತ್ಪಾದಿಸಿದೆ ಎಂದು ಕೃಷಿ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಆದರೆ, ಅಕಾಲಿಕ ಮಳೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಉದ್ದಿನ ಬೇಳೆ ಉತ್ಪಾದನೆಯಲ್ಲಿ ಭಾರಿ ಕುಸಿತಕಂಡಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದ ಸೇರಿದಂತೆ ಉದ್ದಿನ ಬೇಳೆ ಹೆಚ್ಚಾಗಿ ಬೆಳೆಯುವ ರಾಷ್ಟ್ರಗಳ ಮೇಲೆ ಪ್ರತಿಕೂಲ ವಾತಾವರಣ ಪ್ರಭಾವ ಬೀರಿದ ಪರಿಣಾಮದಿಂದ ಉತ್ಪಾದನೆಯಲ್ಲಿ ಕುಸಿತವಾಗಿದೆ.
ಭಾರತ, ಮ್ಯಾನ್ಮಾರ್ನಿಂದ ಬಹುಪಾಲು ಶೇ. 80 ರಷ್ಟು ಉದ್ದಿನ ಬೇಳೆ ಆಮದು ಮಾಡಿಕೊಳ್ಳುತ್ತದೆ. ರಾಜಕೀಯ ವಿಪ್ಲವದಿಂದಾಗಿ ಇದೀಗ ಕುಸಿತ ಕಂಡಿದೆ. ಹೀಗಾಗಿ ಉದ್ದಿನ ಬೇಳೆಗೆ ಕೆಜಿಗೆ 13 ರಿಂದ 15 ರೂಪಾಯಿ ಹೆಚ್ಚಾಗಿದೆ. ಹೋಟೆಲ್ಗಳಲ್ಲಿ ಇಡ್ಲಿ ಗಾತ್ರ ಚಿಕ್ಕದಾಗಿದ್ದು, ಬೆಲೆಯು ಏರಿಕೆಯಾಗಿದೆ. ಮ್ಯಾನ್ಮಾರ್‌ನಲ್ಲಿ ಪ್ರತಿಭಟನೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.