ತಿರುವನಂತಪುರ: ಮನೋರಮಾ ನ್ಯೂಸ್-ವಿಎಂಆರ್ ಪೋಟರ್ಸ್ ಅಭಿಪ್ರಾಯ ಸಂಗ್ರಹ ಫಲಿತಾಂಶಗಳು ಮಂಜೇಶ್ವರದಲ್ಲಿ ಬಿಜೆಪಿಯ ಸ್ಪಷ್ಟ ಬಹುಮತದ ಬಗ್ಗೆ ಭವಿಷ್ಯ ನುಡಿದಿದೆ. ಸಮೀಕ್ಷೆಯ ಪ್ರಕಾರ, ಎನ್‍ಡಿಎ ಮಂಜೇಶ್ವರದಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಗೆಲುವು ಸಾಧಿಸುವರೆಂದು ಸಮೀಕ್ಷೆ ತಿಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚಿನ ಭರವಸೆ ಇದ್ದ ಕ್ಷೇತ್ರ ಮಂಜೇಶ್ವರ. ಆ ಸಂದರ್ಭ ಸುರೇಂದ್ರನ್ ಕೇವಲ 89 ಮತಗಳಿಂದ ಪರಾಭವಗೊಂಡಿದ್ದರು. ಯುಡಿಎಫ್ ನಿಂದ ಸ್ಪರ್ಧಿಸಿದ್ದ ಮುಸ್ಲಿಂ ಲೀಗ್ ನ ಪಿ.ಬಿ. ಅಬ್ದುಲ್ ರಸಾಕ್ 56870 ಮತಗಳಿಂದ ಜಯಗಳಿಸಿದ್ದರು. ಸುರೇಂದ್ರನ್ 56781 ಮತಗಳನ್ನು ಪಡೆದಿದ್ದರು.
ಸುರೇಂದ್ರನ್ ವಿರುದ್ದ ಸ್ವತಂತ್ರನಾಗಿ ಸ್ಪರ್ಧಿಸಿದ್ದ ಕೆ. ಸುಂದರ ಅವರು 2016 ರಲ್ಲಿ 467 ಮತಗಳನ್ನು ಪಡೆದಿದ್ದರು. ಸುಂದರ ಅವರನ್ನು ಈ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದ್ದರೂ, ಅವರು ಕೆ ಸುರೇಂದ್ರನ್ ವಿರುದ್ದ ಸ್ಪರ್ಧಿಸುವುದರಿಂದ ಕೊನೆಯ ಗಳಿಗೆಯಲ್ಲಿ ಹಿಂದೆ ಸರಿದು ನಾಮಪತ್ರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವರು.