ರಾಮನಗರ: ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ 26ನೇ ಪ್ರವಾಸಿ ಜಾನಪದ ಲೋಕೋತ್ಸವ ನಡೆಯಿತು.
ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜಾನಪದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರಿಗೆ ಕಲೆಗಳನ್ನು ಪರಿಚಯಿಸಲಾಯಿತು.
ಪ್ರಮುಖವಾಗಿ ಗೊರವರ ಕುಣಿತ, ಪಟ್ಟದ ಕುಣಿತ, ಚಂಡೆವಾದನ, ಗಾರುಡಿ ಗೊಂಬೆಯಾಟ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಕಲೆಗಳನ್ನು ಕಲಾವಿದರು ಪ್ರದರ್ಶನ ಮಾಡಿದರು. ಕೇವಲ ರಾಜ್ಯದ ಕಲೆಗಳಲ್ಲದೇ ಹೊರ ರಾಜ್ಯಗಳಾದ ತಂಜಾವೂರು, ಕೇರಳ, ತೆಲಂಗಾಣ, ತಮಿಳುನಾಡಿನ ಕಲಾವಿದರು ಸಹ ತಮ್ಮ ರಾಜ್ಯದ ಕಲೆಗಳನ್ನು ಪ್ರದರ್ಶನ ಮಾಡಿದರು.
ಈ ಲೋಕೋತ್ಸವದಲ್ಲಿ ಕರಕುಶಲ ಮೇಳವನ್ನು ಕೂಡ ಆಯೋಜಿಸಲಾಗಿತ್ತು. ಮಣ್ಣಿನಿಂದ ಮಾಡಿದ ವಿವಿಧ ರೀತಿಯ ದೀಪಗಳು, ಬಣ್ಣದ ಮರದ ಆಟಿಕೆಗಳು ಸೇರಿದಂತೆ ಹಲವು ಮಳಿಗೆಗಳನ್ನು ತೆರೆಯಲಾಗಿತ್ತು. ಈ ಪ್ರವಾಸಿ ಲೋಕೋತ್ಸವವನ್ನು ಸುಮಾರು 5 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಜಾನಪದ ಲೋಕದ ಕಾರ್ಯದರ್ಶಿ ರುದ್ರಪ್ಪ ಹೆಮ್ಮೆ ವ್ಯಕ್ತಪಡಿಸಿದರು.