ಕಾಸರಗೋಡು: ನಗರಸಭಾ ವ್ಯಾಪ್ತಿಯ ಬೀರಂತಬೈಲ್ ಪ್ರದೇಶದ ಬಾವಿಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಪತ್ತೆಹಚ್ಚಲಾಗಿದೆ. ವಾರದ ಹಿಂದೆ ಬಾವಿ ನೀರನ್ನು ಸಂಗ್ರಹಿಸಿ ಕೋಯಿಕ್ಕೋಡಿನ ಲ್ಯಾಬ್‍ಗೆ ತಪಾಸಣೆಗೆ ಕಳುಹಿಸಲಾಗಿತ್ತು. ನೀರಿನಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದ್ದರೂ, ಯಾರಿಗೂ ಸೋಂಕು ತಗುಲಿರುವ ಮಾಹಿತಿಯಿಲ್ಲ ಎಂದು ನಗರಸಭಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಬಾವಿಯಿಂದ ಈ ಹಿಂದೆ ಲಾರಿಗಳಲ್ಲಿ ನೀರು ಸಂಗ್ರಹಿಸಿ ನಾನಾ ಕಡೆ ತಲುಪಿಸಲಾಗುತ್ತಿದ್ದರೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ನೀರು ಸಂಗ್ರಹಿಸಿರಲಿಲ್ಲ. ಬೇಸಿಗೆಯಲ್ಲಿ ಮತ್ತೆ ನೀರು ಸಂಗ್ರಹಿಸುವ ಮೊದಲು ನೀರಿನ ತಪಾಸಣೆ ನಡೆಸಲು ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಿದಾಗ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಶಿಗೆಲ್ಲಾ ರೋಗ ಕರುಳನ್ನು ಬಾಧಿಸುತ್ತಿದ್ದು, ಆರಂಭಿಕ ಹಂತದಲ್ಲಿ ವಾಂತಿಭೇದಿ, ಜ್ವರ, ಹೊಟ್ಟೆನೋವುನಿತ್ರಾಣ, ರಕ್ತಮಿಶ್ರಿತ ಮಲವಿಸರ್ಜನೆ ಕಂಡುಬರುತ್ತದೆ. ಐದು ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಸೋಂಕು ಬೇಗನೆ ತಗಲುತ್ತಿದೆ. ಬೀರಂತಬೈಲ್ ಪ್ರದೇಶದ ಬಾವಿಗಳನ್ನು ಕ್ಲೋರಿನೇಟ್ ನಡೆಸಲಾಗುತ್ತಿದ್ದು, ಬಾವಿ ನೀರನ್ನು ಮತ್ತೆ ತಪಾಸಣೆಗಾಗಿ ಕೋಯಿಕ್ಕೋಡಿನ ಲ್ಯಾಬ್‍ಗೆ ರವಾನಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.