ಉಪ್ಪಳ: ಕೇರಳದಲ್ಲಿ ಇಂದು ಆಡಳಿತ ನಡೆಸುತ್ತಿರುವ ಎಡರಂಗ ಸರ್ಕಾರ ಬೃಹತ್ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿಸಿರುವುದು ತನಿಖೆಯಿಂದ ವ್ಯಕ್ತವಾಗುತ್ತಿದೆ. ಅಲ್ಲದೆ ಎಡರಂಗದ ಈಹಿಂದಿನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ್ ಅವರ ಸುಪುತ್ರ ಬೆಂಗಳೂರು ಕೇಂದ್ರೀಕರಿಸಿ ಡ್ರಗ್ಸ್ ಪ್ರಕರಣದ ಪ್ರಧಾನ ಸೂತ್ರಧಾರನಾಗಿ ಬಂಧನಕ್ಕೊಳಗಾಗಿದ್ದು ಇವೆಲ್ಲ ಕಾರಣಗಳಿಂದ ಕೇರಳದ ಎಡರಂಗ ಸರ್ಕಾರ ಕೇರಳದ ಅಧಃಪತನಕ್ಕೆ ಕಾರಣವಾಗಿದೆ. ಸ್ವಾರ್ಥ ಲಾಲಸೆ, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಷ್ಟೇ ಮುಳುಗೇಳುವ ಕೇರಳದ ರಾಜಕೀಯ ತೀವ್ರ ಕಳವಳಕಾರಿ ಎಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಜೋಡುಕಲ್ಲಿನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ವಿಶೇಷ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕೋವಿಡ್ ಇಂದು ಅತಿ ಹೆಚ್ಚು ಪತ್ತೆಯಾಗಿರುವುದು ಕೇರಳದಲ್ಲಾಗಿದೆ. ಇತರ ರಾಜ್ಯಗಳಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ತನ್ನ ಭ್ರಷ್ಟಾಚಾರವನ್ನು ಮುಚ್ಚುವ ಯತ್ನದಲ್ಲಿ ಸರ್ಕಾರ ಮುಳುಗೇಳುತ್ತಿರುವುದರಿಂದ ಕೋವಿಡ್ ನಿಯಂತ್ರಣದಲ್ಲಿ ಹಿಂದುಳಿಯಲು ಕಾರಣವಾಯಿತು. ಗಡಿನಾಡು ಕಾಸರಗೋಡಿನಲ್ಲಿ ಅಭಿವೃದ್ದಿಯ ಕುಂಠಿತತತೆಯಿಂದ ಲಾಕ್ ಡೌನ್ ಸಂದರ್ಭ ಅಂತರ್ ರಾಜ್ಯ ಗಡಿಗಳು ಮುಚ್ಚಲ್ಪಟ್ಟಾಗ ತುರ್ತು ಸೇವೆಗಳು ಲಭ್ಯವಾಗದೆ ಪರದಾಡುವಂತಾಯಿತು. ಇಂತಹ ಹಿನ್ನಡೆಗೆ, ಅಭಿವೃದ್ದಿ ಯೋಜನೆಗಳನ್ನು ತಾರದಿರುವುದೇ ಕಾರಣವಾಗಿದ್ದು, ಕೇರಳದ ಎಲ್.ಡಿ.ಎಫ್ ಹಾಗೂ ಯು.ಡಿ.ಎಫ್ ಸರ್ಕಾರಗಳು ಕಾಸರಗೋಡನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಅವರು ಟೀಕಿಸಿದರು.
ಕೇರಳದಲ್ಲಿ ದಶಕಗಳಿಂದ ಆಡಳಿತ ನಡೆಸುವ ಸರ್ಕಾರಗಳು ಮಂಜೇಶ್ವರ, ಕಾಸರಗೋಡಿನ ಸಮಗ್ರ ಅಭಿವೃದ್ದಿಗೆ ಯಾಕೆ ಕ್ರಮಗಳನ್ನು ಕೈಗೊಂಡಿಲ್ಲ ಎoದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರದ ಯಾವುದೇ ಅಭಿವೃದ್ದಿ ಯೋಜನೆಗಳನ್ನು ರಾಜ್ಯವ್ಯಾಪಿಯಾಗಿ ನೀಡದೆ ವಂಚಿಸಿದೆ. ಫಸಲ್ ಭೀಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಕೃಷಿ ಸನ್ಮಾನ್ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಂತಹ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ರಾಜ್ಯದಲ್ಲಿ ಸಮರ್ಥವಾಗಿ ಬಳಸದೆ ಜನಸಾಮಾನ್ಯರನ್ನು ವಂಚಿಸಿದೆ ಎಂದರು.
ಜನರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ, ಜನವಂಚನೆಯಲ್ಲಿ ಮುಳುಗಿರುವ ಶಾಸಕರು ರಾಜ್ಯವನ್ನು, ಕಾಸರಗೋಡು ಜಿಲ್ಲೆಯನ್ನು ಹಿಂದುಳಿಯುವಂತೆ ಮಾಡಿದೆ. ಭಕ್ತರ ನಂಬಿಕೆ, ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸರ್ಕಾರವನ್ನು ಕಿತ್ತೆಗೆಯಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.