ಮುಂಬೈ: ತನ್ನ ಕಂಪನಿಯ ಎಲ್ಲಾ ಸಿಬ್ಬಂದಿವರ್ಗ ಮತ್ತವರ ಕುಟುಂಬದವರ ಕೋವಿಡ್ ಲಸಿಕೆ ವೆಚ್ಚವನ್ನು ರಿಲಾಯನ್ಸ್ ತುಂಬಲಿದೆ ಎಂದು ನೀತಾ ಅಂಬಾನಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ತನ್ನ ಕಂಪನಿಯ ಸಿಬ್ಬಂದಿಗೆ ಮೇಲ್ ಮಾಡಿರುವ ಅವರು , ಭಾರತ ಸರ್ಕಾರದ ಕೋವಿಡ್-19 ಲಸಿಕಾ ಯೋಜನೆಗೆ ಕುಟುಂಬ ಸದಸ್ಯರ ಹೆಸರು ನೊಂದಾಯಿಸಿ ಎಂದು ರಿಲಾಯನ್ಸ್ ಗ್ರೂಪ್ ಕಂಪನಿಗಳ ಎಲ್ಲಾ ಉದ್ಯೋಗಿಗಳಿಗೆ ಲಸಿಕೆಯ ಎಲ್ಲಾ ವೆಚ್ಚವನ್ನೂ ಕಂಪನಿಯೇ ಭರಿಸುತ್ತದೆ ಎಂದೂ ಅವರು ತಿಳಿಸಿದ್ಧಾರೆ. ಹಾಗೆಯೇ, ತಮ್ಮ ಉದ್ಯೋಗಿ, ಅವರ ಸಂಗಾತಿ, ಪೋಷಕರು ಮತ್ತು ಮಕ್ಕಳ ವ್ಯಾಕ್ಸಿನೇಶನ್ ವೆಚ್ಚವನ್ನೂ ಕಂಪನಿ ಭರಿಸುವುದಾಗಿ ನೀತಾ ಮುಕೇಶ್ ಅಂಬಾನಿ ಇ-ಮೇಲ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
'ರಿಲಾಯನ್ಸ್ ಫ್ಯಾಮಿಲಿ ಡೇ 2020ರ ಸಂದೇಶದಲ್ಲಿ, ಭಾರತದಲ್ಲಿ ಮಾನ್ಯ ಪಡೆದ ಯಾವುದಾದರೂ ಕೋವಿಡ್-19 ಲಸಿಕೆ ಲಭ್ಯವಾದ ಕೂಡಲೇ ರಿಲಾಯನ್ಸ್ನ ಎಲ್ಲಾ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಲಸಿಕೆ ಹಾಕಿಸುತ್ತೇವೆಂದು ನಾನು ಮತ್ತು ಮುಕೇಶ್ ವಾಗ್ದಾನ ನೀಡಿದ್ದೆವು. ನಾವು ಆ ಮಾತಿಗೆ ಬದ್ಧರಾಗಿದ್ದೇವೆ..' ಎಂದು ನೀತಾ ಅಂಬಾನಿ ತಮ್ಮ ಮೇಲ್ ನಲ್ಲಿ ತಿಳಿಸಿದ್ದಾರೆ.
ರಿಲಾಯನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಲಸಿಕೆ ವೆಚ್ಚವಷ್ಟೇ ಅಲ್ಲ ಕೊರೋನಾ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿಗಳಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳಿದ್ಧಾರೆ. ಅವರ ನೊಂದಾಯಿತ ಕುಟುಂಬ ಸದಸ್ಯರ ಸಂಖ್ಯೆಯನ್ನೂ ಸೇರಿಸಿದರೆ 19 ಲಕ್ಷ ಮಂದಿಯಾಗುತ್ತಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಇಷ್ಟೂ ಮಂದಿಯ ಚಿಕಿತ್ಸೆ ಮತ್ತು ಲಸಿಕಾ ವೆಚ್ಚವನ್ನ ಕಂಪನಿಯೇ ಭರಿಸುತ್ತಿರುವುದು ಗಮನಾರ್ಹ.