ಬೆಂಗಳೂರು: ಕಳೆದ ಬಾರಿ ಕರೊನಾ ಸೋಂಕು ಕಾಣಿಸಿಕೊಳ್ಳದವರಿಗೆ ಈ ಬಾರಿ 2ನೇ ಅಲೆಯಲ್ಲಿ ಕರೊನಾ ಬರುವ ಸಾಧ್ಯತೆ ಹೆಚ್ಚಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2 ವಾರಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕರೊನಾ 2ನೇ ಅಲೆ ಮತ್ತೆ ಬರುತ್ತಿದೆ. ಕಳೆದ ಬಾರಿ ಕರೊನಾಗೆ ಸೋಂಕು ಒಳಗಾಗದವರಿಗೆ ಈ ಬಾರಿ ಬರುವ ಸಾಧ್ಯತೆಯಿದೆ. ಹಾಗಾಗಿ, ಮುಂದಿನ 6 ತಿಂಗಳ ಕಡ್ಡಾವಾಗಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ವಾಕ್ಸಿನ್ ತಗೊಂಡವರಿಗೂ ಬರುತ್ತೆ: 'ಕೋವ್ಯಾಕ್ಸಿನೇಷನ್ ಅಥವಾ ಕೋವಿಶೀಲ್ಡ್ ಇದರಲ್ಲಿ ಯಾವುದಾದರೂ ತೆಗೆದುಕೊಳ್ಳಬಹುದು. ಆದರೆ, ವ್ಯಾಕ್ಸಿನ್ ತೆಗೆದುಕೊಂಡವರಿಗೆ ಕರೊನಾ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗದು. ವ್ಯಾಕ್ಸಿನ್ ತೆಗೆದುಕೊಂಡ ಕೂಡಲೆ ದೇಹದಲ್ಲಿ ಇಮ್ಯೂನಿಟಿ ಶಕ್ತಿ ಹೆಚ್ಚುವುದಿಲ್ಲ. ಆದರೆ, ವ್ಯಾಕ್ಸಿನ್ ತೆಗೆದುಕೊಂಡವರಲ್ಲಿ ಕರೊನಾ ಬಂದರೂ ಅದರ ತೀವ್ರತೆ ಕೊಂಚ ಕಡಿಮೆ ಇರುತ್ತದೆ. ಆದ್ದರಿಂದ, ಯಾರೂ ನಿರ್ಲಕ್ಷ್ಯ ಮಾಡುಕೂಡದು ಎಂದು ಎಚ್ಚರಿಕೆ ನೀಡಿದರು.
ದೇವಾಲಯದ ಅರ್ಚಕರಿಗೂ ಕರೊನಾ ಪರೀಕ್ಷೆ ಆಗಬೇಕಿದೆ. ಇತ್ತೀಚೆಗೆ ರಥೋತ್ಸವ ಮತ್ತಿತರ ಧಾರ್ಮಿಕ ಜಾತ್ರೆಗಳು ಹಾಗೂ ಮದುವೆ ಸೇರಿ ಇನ್ನಿತರ ಶುಭ ಸಮಾರಂಭಗಳಲ್ಲಿ ಜನರು ಗುಂಪು ಗುಂಪಾಗಿ ಸೇರುವುದು ಹೆಚ್ಚಾಗಿದೆ. ಹಾಗಾಗಿ, ಯಾರೂ ನಿರ್ಲಕ್ಷ್ಯತನ ತೋರದೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.