ಜಿನೀವ : ಶೀಘ್ರದಲ್ಲೇ ಒಂದೇ ಡೋಸ್ ತೆಗೆದುಕೊಳ್ಳಬೇಕಾದ ಕರೊನಾ ಲಸಿಕೆಯೊಂದು ಜಗತ್ತಿನ ವಿವಿಧ ರಾಷ್ಟ್ರಗಳ ಬಳಕೆಗೆ ಲಭ್ಯವಾಗಲಿದೆ. ಹೌದು, ಒಂದೇ ಇಂಜೆಕ್ಷನ್ನ ಅಗತ್ಯ ಬೀಳುವ ಮತ್ತು ಶೇಖರಿಸಿಡಲೂ ಸುಲಭವಾದ ಜಾನ್ಸನ್ ಅಂಡ್ ಜಾನ್ಸನ್(ಜೆಅಂಡ್ಜೆ) ಕಂಪೆನಿಯ ಕರೊನಾ ಲಸಿಕೆಗೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್ಒ) ತುರ್ತು ಬಳಕೆಯ ಅನುಮೋದನೆ ನೀಡಿದೆ.
ಫೈಜರ್-ಬಯೋಟೆಕ್ ಮತ್ತು ಆಸ್ಟ್ರಜೆನೆಕಾ ಕಂಪೆನಿಗಳ ನಂತರ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ ಸಿಕ್ಕಿರುವ ಮೂರನೇ ಕರೊನಾ ಲಸಿಕೆ ಇದಾಗಿದೆ. ಕೋವ್ಯಾಕ್ಸ್ ಕಾರ್ಯಕ್ರಮದಡಿ ಉತ್ಪಾದನೆ ಮಾಡಿ ವಿವಿಧ ದೇಶಗಳಿಗೆ ಪೂರೈಸುವ ಉದ್ದೇಶವಿರುವ ಈ ಲಸಿಕೆಗೆ ಗುರುವಾರ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯ ಪರವಾನಗಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಡಬ್ಲ್ಯೂಹೆಚ್ಒ ಇದನ್ನು ಎಮರ್ಜೆನ್ಸಿ ಲಿಸ್ಟಿಂಗ್ಗೆ ಸೇರಿಸಿದೆ. ಇದೀಗ ಉತ್ಪಾದಕ ಕಂಪೆನಿಗಳು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತಾದ ಡೇಟಾವನ್ನು ತಯಾರಿಸಿ ಅದಕ್ಕೆ ಪೂರ್ಣ ಪರವಾನಗಿಯನ್ನು ಪಡೆಯಬಹುದಾಗಿದೆ.
ಡಬ್ಲ್ಯೂಹೆಚ್ಒ ಡೈರೆಕ್ಟರ್-ಜನರಲ್ ಟೆಡ್ರೋಸ್ ಅಧನಾಂ ಘೆಬ್ರೆಯೇಸಸ್ ಅವರು ನೀಡಿರುವ ಹೇಳಿಕೆಯಲ್ಲಿ, 'ಕೋವಿಡ್-19 ವಿರುದ್ಧದ ಪ್ರತಿಯೊಂದು ಹೊಸ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಧನವು ಮಹಾಮಾರಿಯನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ತುರ್ತು ಬಳಕೆ ಅನುಮೋದನೆಯು ಕೋವಾಕ್ಸ್ನಡಿ ಲಸಿಕೆಯನ್ನು ಪಡೆದು ವಿತರಿಸಲು ಹಸಿರು ನಿಶಾನೆಯಾಗಿದೆ' ಎಂದಿದ್ದಾರೆ.
'ಶೇಖರಣೆಗೆ ತೀರಾ ಕಡಿಮೆ ಉಷ್ಣಾಂಶದ ಅಗತ್ಯವಿಲ್ಲದಿರುವುದು ಉತ್ತಮ ಅಂಶವಾಗಿದೆ. ಗವಿ ವಾಕ್ಸಿನ್ ಅಲೆಯನ್ಸ್ನೊಂದಿಗೆ ನಡೆಯುತ್ತಿರುವ ಕೋವಾಕ್ಸ್ ಕಾರ್ಯಕ್ರಮದಡಿ ಜೆಅಂಡ್ಜೆ ಲಸಿಕೆಯ 500 ಮಿಲಿಯನ್ಗೂ ಹೆಚ್ಚು ಡೋಸ್ಗಳನ್ನು ಪೂರೈಸುವ ಒಪ್ಪಂದವಾಗಿದ್ದು, ಜುಲೈ ವೇಳೆಗೆ ಉತ್ಪಾದನೆ ಪೂರೈಸಲಿದೆ' ಎಂದು ಡಬ್ಲ್ಯೂಹೆಚ್ಒದ ಹಿರಿಯ ಸಲಹೆಗಾರ ಬ್ರೂಸ್ ಏಲ್ವಾರ್ಡ್ ಹೇಳಿದ್ದಾರೆ. 2021 ವರ್ಷಾಂತ್ಯದೊಳಗೆ ಈ ಲಸಿಕೆಯ ಒಂದು ಬಿಲಿಯನ್ ಡೋಸ್ಗಳನ್ನು ಜಗತ್ತಿನ ವಿವಿಧ ದೇಶಗಳಿಗೆ ಒದಗಿಸುವ ಉದ್ದೇಶವಿದೆ ಎನ್ನಲಾಗಿದೆ.